×
Ad

ಬಿ.ಸಿರೋಡ್‌ನ ಶಿಕ್ಷಣಾಧಿಕಾರಿ ಕಚೇರಿಗೆ ಸಿಎಫ್‌ಐ ವತಿಯಿಂದ ವಿದ್ಯಾರ್ಥಿಗಳ ಮಾರ್ಚ್

Update: 2018-02-27 21:02 IST

ಬಂಟ್ವಾಳ, ಫೆ. 27: ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಸಾಂಸ್ಥಿಕ ದಬ್ಬಾಳಿಕೆ, ದೌರ್ಜನ್ಯ, ನಿಗೂಢ ಆತ್ಮಹತ್ಯೆ, ಧಾರ್ಮಿಕ ಹಕ್ಕುಗಳ ಕಡೆಗಣನೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ಮಂಗಳವಾರ ಬಿ.ಸಿರೋಡಿನಿಂದ "ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳ ಮಾರ್ಚ್" ಜಾಥಾ ನಡೆಯಿತು.

ಸಿಎಫ್‌ಐ ಜಿಲ್ಲಾ ಉಪಾಧ್ಯಕ್ಷೆ ಮುರ್ಶಿದಾ ಮಾತನಾಡಿ, ರಾಜ್ಯದ ವಿದ್ಯಾರ್ಥಿಗಳ ರಕ್ಷಣೆಯ ದೃಷ್ಟಿಯಲ್ಲಿ ಅವರ ಮೇಲಾಗುತ್ತಿರುವ ಮಾನಸಿಕ ಮತ್ತು ದೈಹಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕಾನೂನುಗಳನ್ನು ತರಲು ಸರಕಾರ ವಿಫಲವಾಗಿದೆ. ರಾಜ್ಯಾದ್ಯಂತ ವಿದ್ಯಾರ್ಥಿಗಳ ಮೇಲಿನ ಹಲ್ಲೆ, ವಿದ್ಯಾರ್ಥಿಗಳ ವೈಯಕ್ತಿಕ ಹಕ್ಕಿನ ನಿರಾಕರಣೆ ಮತ್ತು ಅನೈತಿಕ ಪೋಲಿಸ್‌ಗಿರಿಗಳು ನಿರಂತರವಾಗಿ ನಡೆಯುತ್ತಿದೆ. ಇದು ಖಂಡನೀಯ ಎಂದರು.

ಸಂವಿಧಾನದ ಅನುಚ್ಛೇದ 25 ಮತ್ತು 28ರ ಪ್ರಕಾರ ಈ ದೇಶದ ಪ್ರತಿಯೊಬ್ಬ ಪ್ರಜೆಗೂ ತನ್ನ ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುವ ಹಕ್ಕಿದೆ. ಸರಕಾರಗಳು ಇಲಾಖೆಗಳು ಮತ್ತು ಸಂಸ್ಥೆಗಳು ಸಂವಿಧಾನ ಕೊಡಮಾಡಿರುವ ಹಕ್ಕನ್ನ ಅನುಭವಿಸಲು ಅವಕಾಶವನ್ನು ನೀಡಬೇಕು. ಇತ್ತೀಚಿಗೆ ರಾಜ್ಯದ ಕೆಲವು ಸರಕಾರಿ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ಸಮವಸ್ತ್ರದ ನೆಪವೊಡ್ಡಿ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರು ಧರಿಸುವ ಸ್ಕಾರ್ಫನ್ನು ಬಲವಂತವಾಗಿ ನಿಷೇಧ ಹೇರುತಿದೆ. ಜೊತೆಗೆ ಸಂಘಪರಿವಾರ ಪ್ರಾಯೋಜಿತ ಕೆಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮಧ್ಯಸ್ಥಿಕೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಹೇಳಿದರು.

ದ.ಕ ಜಿಲ್ಲೆಯ ಪೆರುವಾಯು ಕಾಲೇಜು, ಶಿವಮೊಗ್ಗ ಜಿಲ್ಲೆಯ ಸಹ್ಯಾದ್ರಿ ಕಾಲೇಜು ಮತ್ತು ಹಾವೇರಿಗಳಲ್ಲಿ ನಡೆದ ಪ್ರಕರಣಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ಮಾನಸಿಕ ಮತು ದೈಹಿಕ ಹಿಂಸಾಚಾರಗಳು ನಡೆದಿದೆ. ಇಂತಹ ಪ್ರಕರಣಗಳಿಂದಾಗಿ ಈಗಾಗಲೇ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರೂ ಕೂಡ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸುತ್ತಿದ್ದಾರೆ ಎಂದರು.

ಸಿಎಫ್‌ಐ ರಾಜ್ಯ ಸಮಿತಿ ಸದಸ್ಯ ಅತಾವುಲ್ಲಾ ಮಾತನಾಡಿ, ರಾಜ್ಯದಲ್ಲಿ ವಿದ್ಯಾರ್ಥಿಗಳ ಮೇಲೆ ಖಾಸಗಿ ಸಂಸ್ಥೆಗಳ ದೌರ್ಜನ್ಯ ಮಿತಿ ಮೀರುತ್ತಿದ್ದು, ಅತ್ಯಧಿಕ ಡೊನೇಶನ್ ವಸೂಲಿ, ಹಾಜರಾತಿಯ ಕೊರತೆ ನೆಪವೊಡ್ಡಿ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ನಿರಾಕರಣೆ, ಸಣ್ಣ ಸಣ್ಣ ವಿಚಾರಗಳಿಗೆ ಹೆಚ್ಚಿನ ದಂಡ ವಸೂಲಿ, ಜಾತಿ ತಾರತಮ್ಯತೆ ಹೆಚ್ಚುತ್ತಿದೆ. ಇದಕ್ಕೆ ಸರಕಾರಗಳ ನಿರ್ಲಕ್ಷ್ಯತನವೇ ಕಾರಣ ಎಂದರು.

ಬೇಡಿಕೆಗಳು:

ಖಾಸಗಿ ಮತ್ತು ಸರಕಾರಿ ವಿದ್ಯಾರ್ಥಿನಿಲಯಗಳಲ್ಲಿ ಅವರ ರಕ್ಷಣೆಗೆ ಸಂಬಂಧಪಟ್ಟಂತೆ ಭದ್ರತೆಯ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಕುಂದುಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಹಾಸ್ಟೆಲ್‌ಗಳ ಮೇಲೆ ಸರಕಾರಿ ಮೇಲುಸ್ತುವಾರಿ ಸಮಿತಿಗಳನ್ನ ರಚಿಸುವುದು. "ಮಹಿಳಾ ದೌರ್ಜನ್ಯ ವಿರೋಧಿ" ಕಾನೂನುಗಳನ್ನು ಬಲಪಡಿಸುವುದು.

3 ತಿಂಗಳಿಗೊಮ್ಮೆ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಭೆ ಮತ್ತು ಸಮಾಲೋಚನೆ ನಡೆಸುವುದು.

ಪ್ರತಿ ಜಲ್ಲೆಯಲ್ಲಿ ಜಿಲ್ಲಾಧಿಕಾರಿಯ ಅಧೀನದಲ್ಲಿ ಪ್ರತೀ ತಿಂಗಳು ವಸತಿನಿಲಯಗಳ ಪರಿಶಿಲನೆಗೆ ಅಧಿಕಾರಿಗಳನ್ನು ನೇಮಿಸಿ, ಸರಕಾರಕ್ಕೆ ವರದಿ ಸಲ್ಲಿಸುವುದು. ಪ್ರತಿ ವಿದ್ಯಾರ್ಥಿನಿಲಯಗಳಲ್ಲಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಸಿಸಿ ಕ್ಯಾಮರಾ ಕಡ್ಡಾಯಗೊಳಿಸುವುದು.

ಶಿಕ್ಷಣ ಸಂಸ್ಥೆಗಳಲ್ಲಿ "ವಿದ್ಯಾರ್ಥಿ ದೌರ್ಜನ್ಯ ವಿರೋಧಿ" ಸೆಲ್‌ಗಳನ್ನು ರಚಿಸುವುದು ಮತ್ತು ಬಲಪಡಿಸುವುದು. ವಿದ್ಯಾರ್ಥಿಗಳ ಮೇಲಿನ ಹಲ್ಲೆ ಮತ್ತು ಅನೈತಿಕ ಪೋಲೀಸ್‌ಗಿರಿಯನ್ನು ತಡೆಗಟ್ಟಲು ಸರಕಾರವು ಹೊಸ ಕಾನೂನುಗಳನ್ನು ತರುವುದು. ವಿದ್ಯಾರ್ಥಿಗಳು ತಮ್ಮ ದೂರುಗಳನ್ನ ನೀಡಲು ಸಹಾಯವಾಣಿಗಳನ್ನ ಪ್ರಾರಂಭಿಸುವುದು.

ವಿದ್ಯಾರ್ಥಿಗಳ ಧಾರ್ಮಿಕ ಹಕ್ಕನ್ನು ನಿರಾಕರಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಗಳನ್ನು ಜಾರಿಗೊಳಿಸುವುದು. ವಸತಿ ನಿಲಯಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆಗಟ್ಟಲು ಶೀಘ್ರವೇ "ಝೈಬುನ್ನಿಸಾ ಕಾಯ್ದೆ" ಅನುಷ್ಠಾನಕ್ಕೆ ತರುವುದು ಎಂಬ ಬೇಡಿಕೆಗಳನ್ನು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಇದಕ್ಕೂ ಮೊದಲು ಬಿ.ಸಿರೋಡಿನ ಮೇಲ್ಸೇತುವೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯವರೆಗೆ ವಿದ್ಯಾರ್ಥಿ ಮಾರ್ಚ್ ನಡೆಯಿತು. ಈ ಸಂದರ್ಭದಲ್ಲಿ ಸಿಎಫ್‌ಐ ತಾಲೂಕು ಅಧ್ಯಕ್ಷ ನಬೀಲ್ ರಹ್ಮಾನ್, ಜಿಲ್ಲಾ ಉಪಾಧ್ಯಕ್ಷ ಫಹದ್, ಸಲ್ಮಾನ್ ಬಂಟ್ವಾಳ ಉಪಸ್ಥಿತರಿದ್ದರು. ನಾಸಿರ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News