ಪಡುಬಿದ್ರೆ: ಪಡಿತರ ಚೀಟಿ ವಿತರಣೆಗೆ ತಡವಾಗಿ ಬಂದ ಶಾಸಕರು
ಪಡುಬಿದ್ರೆ, ಫೆ. 27: ಪಡುಬಿದ್ರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಪಡಿತರ ಚೀಟಿ ವಿತರಣೆಗೆ ಸುಮಾರು 3 ಗಂಟೆಗಳ ಕಾಲ ಶಾಸಕ ವಿನಯಕುಮಾರ್ ಸೊರಕೆ ತಡವಾಗಿ ಆಗಮಿಸಿದ ಘಟನೆ ನಡೆಯಿತು.
ಪಡುಬಿದ್ರೆ ಗ್ರಾಮ ಪಂಚಾಯತ್ ನಲ್ಲಿ ಬೆಳಿಗ್ಗೆ 10.30ಕ್ಕೆ ಪಡಿತರ ಚೀಟಿ ವಿತರಣೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಪಡಿತರ ಚೀಟಿ ಪಡೆಯಲು ಬಂದಿದ್ದ ಅರ್ಜಿದಾರರು 10ಗಂಟೆಯಿಂದಲೂ ಪಡಿತರ ಚೀಟಿ ಪಡೆಯಲು ಕಾದು ಕುಳಿತಿದ್ದರು. ಶಾಸಕ ವಿನಯಕುಮಾರ್ ಸೊರಕೆಯವರಿಗಾಗಿ ಕಾದು 3 ಗಂಟೆ ವಿಳಂಬವಾಗಿ ಮಧ್ಯಾಹ್ನ 1.45ಕ್ಕೆ ಆಗಮಿಸಿ ಕಾರ್ಡ್ ವಿತರಿಸಿದರು.
ಇದರಿಂದ ಅಸಮಧಾನಗೊಂಡ ಅರ್ಜಿದಾರರು ಕಳೆದ ಎರಡು ವರ್ಷಗಳಿಂದ ಅರ್ಜಿಸಲ್ಲಿಸಿ ಪಡಿತರ ಚೀಟಿ ಪಡೆಯಲು ಅಲೆದಾಟ ನಡೆಸಿದ್ದೇವೆ. ಈ ದಿನ ಪಡಿತರ ಚೀಟಿ ನೀಡುವುದಾಗಿ ಹೇಳಿ ಕರೆದಿದ್ದರು. ಕಾರ್ಡ್ ರೆಡಿ ಇದೆ. ಶಾಶ್ವತ ಪಡಿತರ ಚೀಟಿ ಅಂಚೆ ಮೂಲಕ ಮನೆ ವಿಳಾಸಕ್ಕೆ ತಲುಪಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಹೆಜಮಾಡಿಯ ನಿವಾಸಿ ಅಹ್ಮದ್ ಕಬೀರ್ ಹೇಳಿದ್ದಾರೆ.
ಕಾರ್ಡ್ ವಿತರಿಸಿದ ಬಳಿಕ ಮಾತನಾಡಿದ ಜಿಲ್ಲಾ ಪಂ. ಕ್ಷೇತ್ರಗಳಲ್ಲಿ ಬಿಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲು ಬುಧವಾರ ನಡೆಯುವ ಕೆಡಿಪಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಜನರಿಗೆ ಅನುಕೂಲವಾಗಲೆಂದು ಗ್ರಾಮ ಪಂಚಾಯತ್ ಗೆ ಅಧಿಕಾರಿಗಳನ್ನು ಕರೆಸಿ ಪಡಿತರ ಚೀಟಿಗಳನ್ನು ನೀಡಲು ಕ್ರಮಕೈಗೊಳ್ಳಲಾಗಿತ್ತು ಎಂದರು.
ಪಡುಬಿದ್ರೆ, ಹೆಜಮಾಡಿ, ತೆಂಕ ಎರ್ಮಾಳು ಹಾಗೂ ಬಡಾ ಉಚ್ಚಿಲ ಗ್ರಾಪಂ ವ್ಯಾಪ್ತಿಯ 110 ಅರ್ಜಿದಾರರಿಗೆ ಪಡಿತರ ಚೇಟಿ ಪ್ರತಿಗಳನ್ನು ವಿತರಿಸಲಾಯಿತು.
ಪಡುಬಿದ್ರೆ ಗ್ರಾ.ಪಂ. ಅಧ್ಯಕ್ಷೆ ದಮಯಂತಿ ವಿ ಅಮೀನ್, ಪಿಡಿಒ ಪಂಚಾಕ್ಷರಿ ಕೆರಿಮಠ, ತೆಂಕ ಎರ್ಮಾಳು ಗ್ರಾಪಂ ಅಧ್ಯಕ್ಷೆ ಅರುಣ ಕುಮಾರಿ, ಗ್ರಾಪಂ ಸದಸ್ಯ ಅಶೋಕ್ ಸಾಲ್ಯಾನ್, ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಪಾರ್ವತಿ ಉಪಸ್ಥಿತರಿದ್ದರು.