ಮಣಿಪಾಲದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ
ಉಡುಪಿ, ಫೆ.27: ರಾಜ್ಯ ಸರಕಾರ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. ಇದರಿಂದ ದೊಡ್ಡ ಹೋಟೇಲ್‌ಗಳಲ್ಲಿ ಹೆಚ್ಚು ಹಣ ಕೊಟ್ಟು ಆಹಾರ ಪಡೆದುಕೊಳ್ಳಲು ಅಸಾಧ್ಯವಾಗುವವರಿಗೆ ಕಡಿಮೆ ದರದಲ್ಲಿ ಚಾ-ತಿಂಡಿ, ಊಟ ಲಭ್ಯವಾಗಲಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ, ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಂಗಳವಾರ ಮಣಿಪಾಲ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆಯಲ್ಲಿ ನಿರ್ಮಾಣ ಗೊಂಡ ಇಂದಿರಾ ಕ್ಯಾಂಟೀನ್‌ನ್ನು ಉದ್ಘಾಟಿಸಿದ ಬಳಿಕ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದರು.
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಹಸಿದವರಿಗೆ ಆಹಾರ ಲಭ್ಯವಾಗಿಸಲು ಇಂದಿರಾ ಕ್ಯಾಂಟೀನ್ ಮೂಲಕ ಕಡಿಮೆ ದರದಲ್ಲಿ ಊಟ ತಿಂಡಿಗಳನ್ನು ಪಡೆದುಕೊಳ್ಳಬಹುದು. ವಿಶೇಷವಾಗಿ ವಿವಿಧ ಜಿಲ್ಲೆಗಳಿಂದ ಹಲವಾರು ರೋಗಿಗಳು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗು ವುದರಿಂದ ರೋಗಿಗಳ ಸಂಬಂಧಿಕರಿಗೆ, ಮನೆಯವರಿಗೆ ಹಾಗೂ ಆಟೋ ಚಾಲಕರಿಗೆ, ಕೂಲಿ ಕಾರ್ಮಿಕರಿಗೆ, ವಲಸೆ ಕಾರ್ಮಿಕರಿಗೆ ಒಟ್ಟಾರೆ ತೀರಾ ಬಡವರಿಗೆ ದೊಡ್ಡ ದೊಡ್ಡ ಹೋಟೇಲ್‌ನಲ್ಲಿ ಹಣ ಕೊಟ್ಟು ಆಹಾರ ಪಡೆಯಲು ಅಸಾಧ್ಯವಾಗುವವರಿಗೆ ಇಂದಿರಾ ಕ್ಯಾಂಟೀನ್‌ನಲ್ಲಿ ಕೈಗೆಟಕುವ ದರಕ್ಕೆ ಊಟ ಮತ್ತು ತಿಂಡಿ ಲಭ್ಯವಾಗಲಿದೆ ಎಂದರು.
ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಒಟ್ಟು ಎರಡು ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾರಂಭಿಸಲಾಗುತ್ತಿದೆ. ಮಣಿಪಾಲದ ಬಳಿಕ ಇನ್ನೊಂದನ್ನು ಉಡುಪಿಯ ಹಳೆ ತಾಲೂಕು ಆವರಣದಲ್ಲಿ ಮುಂದಿನ ವಾರ ಪ್ರಾರಂಭಿಸಲಾಗುವುದು. ಇವುಗಳು ತಲಾ 92 ಲಕ್ಷ ರೂ.ಗಳಲ್ಲಿ ನಿರ್ಮಾಣಗೊಳ್ಳುತ್ತಿದೆ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ಚಾ-ತಿಂಡಿ 5 ರೂಗಳಲ್ಲಿ ಹಾಗೂ ರಾತ್ರಿ ಮತ್ತು ಅಪರಾಹ್ನದ ಊಟ 10 ರೂ.ಗಳಲ್ಲಿ ಲಭ್ಯ ವಾಗಲಿದೆ. ಕ್ಯಾಂಟೀನ್ ನಲ್ಲಿ ದೊರೆಯುವ ಆಹಾರದ ಮೆನುವಿನ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದ್ದು, ಪ್ರತೀ ತಿಂಗಳಿಗೊಮ್ಮೆ ಜನರ ಬೇಡಿಕೆಗಳಿಗನುಗುಣವಾಗಿ ಮೆನುವನ್ನು ಬದಲಾಯಿಸುವ ಜವಾಬ್ದಾರಿಯನ್ನು ಈ ಸಮಿತಿ ಹೊಂದಿದೆ ಎಂದರು.
ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗಿನ ಉಪಹಾರದಲ್ಲಿ ಪ್ರತೀ ದಿನ ಇಡ್ಲಿ, ಅದರೊಂದಿಗೆ ಸೋಮವಾರ ಪುಳಿಯೊಗರೆ, ಮಂಗಳವಾರ ಖಾರಬಾತ್, ಬುಧವಾರ ಪೊಂಗಲ್, ಗುರುವಾರ ರವಾ ಕಿಚಡಿ, ಶುಕ್ರವಾರ ಚಿತ್ರಾನ್ನ, ಶನಿವಾರ ವಾಂಗಿಬಾತ್ ಹಾಗೂ ಬಾನುವಾರ ಖಾರಬಾತ್ ಮತ್ತು ಕೇಸರಿಬಾತ್ ಲಭ್ಯ ವಿರುತ್ತದೆ.
ಅಪರಾಹ್ನ ಮತ್ತು ರಾತ್ರಿ ದಿನನಿತ್ಯ ಅನ್ನ, ತರಕಾರಿ ಸಾಂಬಾರ್ ಮತ್ತು ಮೊಸರನ್ನ ಹಾಗೂ ಅದರೊಂದಿಗೆ ಟೊಮೆಟೋಬಾತ್, ಚಿತ್ರಾನ್ನ, ವಾಂಗಿಬಾತ್, ಬಿಸಿಬೇಳೆಬಾತ್, ಮೆಂತ್ಯೆ ಪುಲಾವ್, ಪುಳಿಯೊಗರೆ, ಪುಲಾವ್ ಲಭ್ಯವಿದೆ.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ನಗರಸಭಾ ಅಧ್ಯಕ್ಷೆ ಮೀನಾಕ್ಷಿಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್, ಪೌರಾಯುಕ್ತ ಡಿ.ಮಂಜುನಾಥಯ್ಯ ಹಾಗೂ ನಗರಸಭಾ ಸದಸ್ಯರು ಉಪಸ್ಥಿತರಿದ್ದರು.