×
Ad

ಉಡುಪಿ: ವಿದ್ಯಾರ್ಥಿಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಎಫ್‌ಐ ಮನವಿ

Update: 2018-02-27 22:11 IST

ಉಡುಪಿ, ಫೆ.27: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇದರ ವತಿ ಯಿಂದ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ‘ಶಿಕ್ಷಣ ಇಲಾಖೆಗೆ ವಿದ್ಯಾರ್ಥಿಗಳ ಮಾರ್ಚ್’ ಅಭಿಯಾನದ ಪ್ರಯುಕ್ತ ಉಡುಪಿ ಜಿಲ್ಲಾ ಘಟಕವು ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಂಗಳವಾರ ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿತು.

ಖಾಸಗಿ ಮತ್ತು ಸರಕಾರಿ ವಿದ್ಯಾನಿಲಯಗಳಲ್ಲಿ ಭದ್ರತೆ ಹಾಗೂ ಸರಕಾರಿ ಮೇಲುಸ್ತುವಾರಿ ಸಮಿತಿಗಳನ್ನು ರಚಿಸಬೇಕು. ಮಹಿಳಾ ದೌರ್ಜನ್ಯ ವಿರೋಧಿ ಕಾನೂನನ್ನು ಬಲಪಡಿಸಬೇಕು. ಮೂರು ತಿಂಗಳಿಗೊಮ್ಮೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಸಭೆ ನಡೆಸಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ.

ಜಿಲ್ಲಾಧಿಕಾರಿಗಳ ಅಧೀನದಲ್ಲಿ ಪ್ರತಿ ತಿಂಗಳು ವಸತಿ ನಿಲಯಗಳ ಪರಿ ಶೀಲನೆಗೆ ಅಧಿಕಾರಿಗಳನ್ನು ನೇಮಿಸಿ ಸರಕಾರಕ್ಕೆ ವರದಿ ಸಲ್ಲಿಸಬೇಕು. ವಿದ್ಯಾರ್ಥಿ ನಿಲಯ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯಗೊಳಿಸಬೇಕು. ಶಾಲೆಗಳಲ್ಲಿ ವಿದ್ಯಾರ್ಥಿ ದೌರ್ಜನ್ಯ ವಿರೋಧಿ ಸೆಲ್‌ಗಳನ್ನು ರಚಿಸಬೇಕು. ವಿದ್ಯಾರ್ಥಿಗಳ ಮೇಲಿನ ಹಲ್ಲೆ ಹಾಗೂ ಅನೈತಿಕ ಪೊಲೀಸ್‌ಗಿರಿಯನ್ನು ತಡೆ ಗಟ್ಟಲು ಸರಕಾರ ಹೊಸ ಕಾನೂನು ತರಬೇಕು.

ವಿದ್ಯಾರ್ಥಿಗಳ ದೂರು ಸ್ವೀಕರಿಸಲು ಸಹಾಯವಾಣಿಗಳನ್ನು ಪ್ರಾರಂಭಿಸ ಬೇಕು. ವಿದ್ಯಾರ್ಥಿಗಳ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ವಸತಿ ನಿಲಯಗಳಲ್ಲಿ ನಡೆಯುವ ದೌರ್ಜನ್ಯಗಳನ್ನು ತಡೆ ಗಟ್ಟಲು ಶೀಘ್ರವೇ ಝೈಬುನ್ನಿಸಾ ಕಾಯಿದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ನಿಯೋಗದಲ್ಲಿ ಸಿಎಫ್‌ಐ ಜಿಲ್ಲಾ ಕಾರ್ಯದರ್ಶಿ ತೌಹೀದ್ ಆದಿಉಡುಪಿ, ನವಾಝ್ ಬ್ರಹ್ಮಾವರ, ಅಝೀಝ್ ಉಚ್ಚಿಲ, ಫಾಹೀಮ್ ಆದಿಉಡುಪಿ, ಹನೀಫ್ ಕಾರ್ಕಳ, ಸಫ್ವಾನ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News