×
Ad

ರಿಕ್ಷಾ ನಿಲ್ದಾಣ ವಿರುದ್ಧ ಆರೋಪ: ಆಡಳಿತ ಸದಸ್ಯರ ಮದ್ಯೆ ವಾಗ್ವಾದ

Update: 2018-02-28 20:37 IST

ಉಡುಪಿ, ಫೆ.28: ಉಡುಪಿ ಜಾಮೀಯ ಮಸೀದಿಯ ಬಳಿ ಯಾವುದೇ ಅನುಮತಿ ಇಲ್ಲದೆ ಆರಂಭಿಸಿರುವ ರಿಕ್ಷಾ ನಿಲ್ದಾಣ ಕೇವಲ ಒಂದು ಧರ್ಮದ ಚಾಲಕರಿಗೆ ಮಾತ್ರ ಸೀಮಿತವಾಗಿದೆ ಎಂಬ ಉಡುಪಿ ನಗರಸಭೆಯ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಸದಸ್ಯ ಚಂದ್ರಕಾಂತ್ ಆರೋಪ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಶಶಿರಾಜ್ ಕುಂದರ್, ನಗರದ ಗುರುಕೃಪಾ ಸ್ಟುಡಿಯೋ ಬಳಿಯ ಪುಟ್‌ಪಾತ್‌ನಲ್ಲಿ ತರಕಾರಿ ಮಾರಾಟ ಮಾಡುವವರನ್ನು ತೆರವುಗೊಳಿಸಬೇಕು ಮತ್ತು ಅಲ್ಲೇ ಸಮೀಪದ ಮಸೀದಿ ಬಳಿ ಅನಧಿಕೃತವಾಗಿ ಆರಂಭಿಸಿರುವ ರಿಕ್ಷಾ ನಿಲ್ದಾಣವನ್ನು ಕೂಡಲೇ ತೆರವುಗೊಳಿಸ ಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಸದಸ್ಯ ಚಂದ್ರಕಾಂತ್, ಮಸೀದಿ ಬಳಿಯ ರಿಕ್ಷಾ ನಿಲ್ದಾಣ ಕೇವಲ ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿದೆ. ಸಂಚಾರಕ್ಕೆ ತೊಂದರೆ ಮಾಡುತ್ತಿರುವ ಈ ನಿಲ್ದಾಣವನ್ನು ಕೂಡಲೇ ತೆರವು ಮಾಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪೂರಕವಾಗಿ ಬಿಜೆಪಿ ಸದಸ್ಯ ಯಶ್ಪಾಲ್ ಸುವರ್ಣ, ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರುವ ರಿಕ್ಷಾ ನಿಲ್ದಾಣವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ತೆರವುಗೊಳಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಆಗ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಸದಸ್ಯ ರಮೇಶ್ ಕಾಂಚನ್, ನಗರದಲ್ಲಿ ಇದು ಒಂದೇ ಅನುಮತಿ ಇಲ್ಲದ ರಿಕ್ಷಾ ನಿಲ್ದಾಣ ಅಲ್ಲ. ಇದೇ ರೀತಿಯ ತುಂಬಾ ರಿಕ್ಷಾ ನಿಲ್ದಾಣಗಳಿವೆ. ಮೊದಲು ಅವುಗಳನ್ನು ತೆರವು ಮಾಡಬೇಕು. ಮಸೀದಿ ಬಳಿಯ ರಿಕ್ಷಾ ನಿಲ್ದಾಣದ ಕೇವಲ ಒಂದು ಧರ್ಮದವರಿಗೆ ಮಾತ್ರ ಸೀಮಿತವಾಗಿದೆ ಎಂಬ ಆರೋಪ ಸುಳ್ಳು. ಅಲ್ಲಿ ಎಲ್ಲ ಧರ್ಮದ ರಿಕ್ಷಾ ಚಾಲಕರು ದುಡಿಯುತ್ತಿದ್ದಾರೆ ಎಂದರು.

ಈ ರಿಕ್ಷಾ ನಿಲ್ದಾಣದ ಪರ ವಕಾಲತ್ತು ಎತ್ತಿದ್ದ ರಮೇಶ್ ಕಾಂಚನ್ ವಿರುದ್ಧ ಅವರದ್ದೆ ಪಕ್ಷದ ಸದಸ್ಯ ಚಂದ್ರಕಾಂತ್ ಹರಿಹಾಯ್ದು ತೀವ್ರ ವಾಗ್ವಾದಕ್ಕೆ ಇಳಿ ದರು. ಇದರಿಂದ ಸಭೆಯಲ್ಲಿ ಗದ್ದಲ ಉಂಟಾಯಿತು. ಈ ಆರೋಪ ನಿರಾಧಾರ. ಹೀಗಾಗಿ ಮೊದಲು ಈ ನಿಲ್ದಾಣ ಒಂದೇ ಧರ್ಮದವರಿಗೆ ಸೀಮಿತ ವಾಗಿದೆಯೇ ಎಂಬುದನ್ನು ಪರಿಶೀಲಿಸಿ ರಮೇಶ್ ಕಾಂಚನ್ ತಿಳಿಸಿದರು.

ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡುವುದು ನಾವಲ್ಲ. ಜಿಲ್ಲಾಡಳಿತವೇ ಅನುಮತಿ ನೀಡುವುದು. ಈ ಬಗ್ಗೆ ಪರಿಶೀಲನೆ ನಡೆಸಲು ಜಿಲ್ಲಾಡಳಿತಕ್ಕೆ ಪತ್ರ ಬರೆ ಯಲಾಗುವುದು ಎಂದು ಪೌರಾಯುಕ್ತ ಡಿ.ಮಂಜುನಾಥಯ್ಯ ಹೇಳಿದರು. ನಗರದಲ್ಲಿ ಅನಧಿಕೃತ ಗೂಡಂಗಡಿ, ತಳ್ಳುಗಾಡಿಗಳ ತೆರವುಗೊಳಿಸುವ ಕುರಿತು ಮಾ. 2 ರಂದು ಡಿವೈಎಸ್ಪಿ ಅವರ ಉಪಸ್ಥಿತಿಯಲ್ಲಿ ಸಭೆ ಕರೆಯಲಾಗಿದೆ. 35ವಾರ್ಡ್ ಗಳಲ್ಲಿ ಸಂಚಾರಕ್ಕೆ ತೊಂದರೆಯಾಗುವ ಅಂಗಡಿಗಳ ಬಗ್ಗೆ ಪರಿಶೀಲನೆಗೆ ಈಗಾಗಲೇ ತಂಡವನ್ನು ರಚಿಸಲಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News