×
Ad

515.15 ಕೋ.ರೂ.ಗಳ ಇನ್ನೊಂದು ಬ್ಯಾಂಕ್ ವಂಚನೆ ಪ್ರಕರಣ ದಾಖಲಿಸಿದ ಸಿಬಿಐ

Update: 2018-02-28 21:37 IST

ಹೊಸದಿಲ್ಲಿ,ಫೆ.28: ಸಿಬಿಐ 515.15 ಕೋ.ರೂ.ಗಳ ಇನ್ನೊಂದು ಬ್ಯಾಂಕ್ ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದರೊಂದಿಗೆ ವಜ್ರೋದ್ಯಮಿ ನೀರವ್ ಮೋದಿಯಿಂದ ಪಂಜಾಬ್ ಆ್ಯಂಡ್ ನ್ಯಾಷನಲ್ ಬ್ಯಾಂಕ್‌ಗೆ ಸುಮಾರು 12,636 ಕೋಟಿ ರೂ.ಗಳ ವಂಚನೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ಕಳೆದ ಒಂದು ತಿಂಗಳಲ್ಲಿ ಅದು ಕೈಗೆತ್ತಿಕೊಂಡಿರುವ ಬಹು ಕೋಟಿ ರೂ.ಗಳ ಬ್ಯಾಂಕ್ ವಂಚನೆ ಪ್ರಕರಣಗಳ ಸಂಖ್ಯೆ ಕನಿಷ್ಠ ಐದಕ್ಕೇರಿದೆ. ರೋಟೊಮ್ಯಾಕ್ ಕಂಪನಿಯ ಪ್ರವರ್ತಕರು, ದಿಲ್ಲಿಯ ಓರ್ವ ವಜ್ರ ವ್ಯಾಪಾರಿ ಮತ್ತು ಸಕ್ಕರೆ ಕಾರ್ಖಾನೆಯೊಂದರ ಪ್ರವರ್ತಕರು ಇತರ ವಂಚನೆ ಪ್ರಕರಣಗಳ ಸೃಷ್ಟಿಕರ್ತರಾಗಿದ್ದಾರೆ.

10 ಬ್ಯಾಂಕುಗಳ ಒಕ್ಕೂಟದ ಪರವಾಗಿ ಕೆನರಾ ಬ್ಯಾಂಕ್ ಸಲ್ಲಿಸಿರುವ ದೂರಿನ ಮೇರೆಗೆ ಸಿಬಿಐ ಮಂಗಳವಾರ ಕೋಲ್ಕತಾ ಮೂಲದ ಆರ್.ಪಿ.ಇನ್ಫೋ ಸಿಸ್ಟಮ್ಸ್ ,ಅದರ ನಿರ್ದೇಶಕರಾದ ಶಿವಾಜಿ ಪಾಂಜಾ, ಕೌಸ್ತವ ರಾಯ್ ಮತ್ತು ವಿನಯ ಬಾಫ್ನಾ ಹಾಗೂ ಉಪಾಧ್ಯಕ್ಷ ದೇಬನಾಥ ಪಾಲ್ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ. ಆರೋಪಿಗಳು ಬ್ಯಾಂಕ್ ಒಕ್ಕೂಟಕ್ಕೆ 515.15 ಕೋ.ರೂ.ಗಳನ್ನು ವಂಚಿಸಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಕೆನರಾ ಬ್ಯಾಂಕ್ ಜೊತೆಗೆ ಎಸ್‌ಬಿಐ, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಫೆಡರಲ್ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಪಿಎನ್‌ಬಿ ಈ ಒಕ್ಕೂಟದಲ್ಲಿವೆ.

ಕೋಲ್ಕತಾದ ಲಾಲ್‌ಬಝಾರ್ ಸ್ಟ್ರೀಟ್‌ನಲ್ಲಿ ಕಚೇರಿಯನ್ನು ಹೊಂದಿರುವ ಆರ್.ಪಿ.ಸಿಸ್ಟಮ್ಸ್ ‘ಚಿರಾಗ್’ಬ್ರಾಂಡ್‌ನಡಿ ಡೆಸ್ಕ್‌ಟಾಪ್ ಮತ್ತು ಲ್ಯಾಪ್‌ಟಾಪ್‌ಗಳನ್ನು ತಯಾರಿಸಿ ಮಾರಾಟ ಮಾಡುವ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಕಂಪ್ಯೂಟರ್‌ಗಳು, ನೆಟ್‌ವರ್ಕಿಂಗ್ ಮತ್ತು ಇತರ ಹಾರ್ಡ್‌ವೇರ್ ಸಂಬಂಧಿತ ಉತ್ಪನ್ನಗಳ ಸರ್ವಿಸಿಂಗ್‌ನಲ್ಲಿ ತೊಡಗಿಕೊಂಡಿದೆ.

ಆರ್.ಪಿ ಸಿಸ್ಟಮ್ಸ್ ನಕಲಿ ದಾಖಲೆಗಳನ್ನು ಸಲ್ಲಿಸಿ ಬ್ಯಾಂಕ್ ಒಕ್ಕೂಟದ ಕೆಲವು ಅಪರಿಚಿತ ಅಧಿಕಾರಿಗಳ ಶಾಮೀಲಾತಿಯೊಂದಿಗೆ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಗೇಲ್ ಇಂಡಿಯಾ, ವಿನ್ಸೆಂಟ್ ಇಲೆಕ್ಟ್ರಾನಿಕ್ಸ್(ರೂರ್ಕೇಲಾ) ಮತ್ತು ಸಿಯಟ್‌ನಂತಹ ಕೆಲವು ಕಂಪನಿಗಳಿಂದ ತನಗೆ ಬಾಕಿ ಹಣ ಬರಬೇಕಾಗಿದೆ ಎಂದು ಆರ್.ಪಿ.ಸಿಸ್ಟಮ್ಸ್ ಸಾಲಗಳನ್ನು ಪಡೆಯುವಾಗ ಬ್ಯಾಂಕುಗಳನ್ನು ನಂಬಿಸಿದ್ದು,ತಮಗೆ ಈ ಸಂಸ್ಥೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಅವು ಎಸ್‌ಬಿಐಗೆ ತಿಳಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News