×
Ad

ಬಿ.ಸಿ.ರೋಡ್: 20 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣಕ್ಕೆ ಸಚಿವರಿಂದ ಶಿಲಾನ್ಯಾಸ

Update: 2018-02-28 22:47 IST

ಬಂಟ್ವಾಳ, ಫೆ. 28: ದ.ಕ.ಜಿಲ್ಲಾ ಪಂಚಾಯತ್, ಬಂಟ್ವಾಳ ತಾಲೂಕು ಪಂಚಾಯತ್ ವತಿಯಿಂದ ತಾಲೂಕು ಪಂಚಾಯತ್ ಹಳೆ ಕಟ್ಟಡದ ಬಳಿ 20 ಕೋಟಿ ರೂ. ವೆಚ್ಚದಲ್ಲಿ ಖಾಸಗಿ ಬಸ್ ನಿಲ್ದಾಣ ಹಾಗೂ ವಾಣಿಜ್ಯ ಸಂಕೀರ್ಣದ

ಶಂಕುಸ್ಥಾಪನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಬುಧವಾರ ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸ್ ನಿಲ್ದಾಣ, ಕ್ರೀಡಾಂಗಣ ಹಾಗೂ ಒಳಚರಂಡಿ ಯೋಜನೆಗೆ ಮಂಜೂರಾತಿಯು ತನ್ನ ಈ ಅವಧಿಯ ದೀಕ್ಷೆಯ ಯೋಜನೆ ಗಳಾಗಿದ್ದು, ಅದೀಗ ಸಾಕಾರಗೊಂಡಿದೆ ಎಂದು ಹೇಳಿದರು. 

ಬಿ.ಸಿ.ರೋಡಿಗೆ ಅಗತ್ಯ ಇರುವ ಎಲ್ಲ ವ್ಯವಸ್ಥೆಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನಗಳನ್ನು ತಾನು ಮಾಡಿದ್ದು, ಇನ್ನೂ ಅನೇಕ ಬೇಡಿಕೆಗಳು ನಮ್ಮ ಮುಂದಿದ್ದು, ಈ ಬಗ್ಗೆಯೂ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದರು. ಅಲ್ಲದೆ ಮಾ. 1ರಂದು ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಬೆಂಜನಪದವಿನಲ್ಲಿ ತಾಲೂಕು ಕ್ರೀಡಾಂಗಣಕ್ಕೆ ಶಿಲಾನ್ಯಾಸ ಹಾಗೂ ನೂತನ ಆರ್‌ಟಿಒ ಕಚೇರಿ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.

ಡಿಎಸ್ಪಿ ಕಚೇರಿ,ಸಂಚಾರಿ ಪೊಲೀಸ್ ಠಾಣೆ, ಕಾರ್ಮಿಕ ಭವನ, ದೇವರಾಜ್ ಅರಸ್ ಭವನ ಇವು ತಮ್ಮ ಮುಂದಿನ ಯೋಜನೆಗಳಾಗಿವೆ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ, ಸಚಿವ ರೈ ನೇತೃತ್ವದಲ್ಲಿ ಬಂಟ್ವಾಳದಲ್ಲಿ ಮಾದರಿಯಾದ ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಮುಂದಿನ ಚುನಾವಣೆಯಲ್ಲಿಯೂ ಸಚಿವ ರೈ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಜಿಪಂ ಸದಸ್ಯರಾದ ಎಂ.ಎಸ್. ಮುಹಮ್ಮದ್, ಚಂದ್ರಪ್ರಕಾಶ ಶೆಟ್ಟಿ, ಮಮತಾ ಗಟ್ಟಿ, ಕಮಲಾಕ್ಷಿ ಕೆ.ಪೂಜಾರಿ, ಮಂಜುಳಾ ಮಾಧವ ಮಾವೆ, ಸಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ.ಬಂಗೇರ, ಎಪಿಎಂಸಿ ಅಧ್ಯಕ್ಷ ಕೆ.ಪದ್ಮನಾಭ ರೈ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಪಿಯೂಸ್ ರೋಡ್ರಿಗಸ್, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಮಾಯಿಲಪ್ಪ ಸಾಲಿಯಾನ್, ತಹಶೀಲ್ದಾರ್ ಪುರಂದರ ಹೆಗ್ಡೆ, ಸಂಜೀವ ಪೂಜಾರಿ, ಸಿಪ್ರಿಯನ್ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News