ಪಡುಬಿದ್ರೆ: ಚೂರಿಯಿಂದ ಇರಿದು ವ್ಯಕ್ತಿಯ ಕೊಲೆ
Update: 2018-02-28 23:29 IST
ಪಡುಬಿದ್ರೆ, ಫೆ. 28: ವ್ಯಕ್ತಿರ್ಯೋರ್ವನನ್ನು ತಂಡವೊಂದು ಮಾರಕಾಯುಧಗಳಿಂದ ದಾಳಿ ನಡೆಸಿ ಕೊಲೆಗೈದ ಘಟನೆ ಪಡುಬಿದ್ರೆ ಠಾಣೆ ವ್ಯಾಪ್ತಿಯ ಕಾಂಜರಕಟ್ಟೆಯ ಬಾರ್‌ವೊಂದರ ಬಳಿ ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ನಡೆದಿದೆ.
ಮೃತರನ್ನು ಕಾಂಜರಕಟ್ಟೆ ನಿವಾಸಿ ನವೀನ್ ಡಿಸೋಜ(42) ಎಂದು ಗುರುತಿಸಲಾಗಿದೆ.
ಶಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಕೃತ್ಯ ಎಸಗಿ ಪರಾರಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ವಿರುದ್ಧ ಪಡುಬಿದ್ರೆ ಠಾಣೆಯಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದ್ದು, ಕೃತ್ಯಕ್ಕೆ ಹಳೆ ವೈಷಮ್ಯ ಕಾರಣವಾಗಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಎಸ್ಪಿ ಲಕ್ಷ್ಮಣ್ ನಿಂಬರಗಿ, ಕಾಪು ವೃತ್ತ ನಿರೀಕ್ಷಕ ಹಾಲ್ ಮೂರ್ತಿ ರಾವ್, ಪಡುಬಿದ್ರೆ ಠಾಣಾಧಿಕಾರಿ ಸತೀಶ್ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ತನಿಖೆ ಮುಂದುವರಿದಿದ್ದು, ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.