ಬಿಜೆಪಿಯ ಜನಸುರಕ್ಷಾ ಯಾತ್ರೆ ಢೋಂಗಿ ಯಾತ್ರೆ: ಪ್ರಮೋದ್ ಮುತಾಲಿಕ್

Update: 2018-03-01 11:21 GMT

ಮಂಗಳೂರು, ಮಾ.1: ಈಗಾಗಲೇ ಕರ್ನಾಟಕದಲ್ಲಿ ಶಿವಸೇನೆಯನ್ನು ಪ್ರಾರಂಭ ಮಾಡಿದ್ದೇವೆ. ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಕಲಬುರಗಿಯ ಸಿದ್ದಲಿಂಗ ಸ್ವಾಮೀಜಿಯವರನ್ನು ಆಯ್ಕೆ ಮಾಡಿದ್ದೇವೆ. ಈ ಬಾರಿ ನಮ್ಮ ಪಕ್ಷ 52 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ಜನಸ್ಪಂದನ, ಅಭಿವೃದ್ಧಿ, ಹಿಂದುತ್ವದ ಬಗ್ಗೆ ಜನರಿಗೆ ಬೇಸರ ಹುಟ್ಟಿದೆ. ಕರ್ನಾಟಕದಲ್ಲಿ ಶಿವಸೇನೆ ನಿಶ್ಚಿತವಾಗಿ ಇತಿಹಾಸ ಬರೆಯಲಿದೆ. ಮುಂದಿನ ದಿನಗಳಲ್ಲಿ ನಾವು ಸ್ಪರ್ಧಿಸುವ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು. ರಾಜ್ಯದಲ್ಲಿ ಶಿವಸೇನೆಗೆ ಬೇಡಿಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಸಭೆ ನಡೆಸಿ ನಮ್ಮ ಅಭ್ಯರ್ಥಿಗಳನ್ನು ಇಲ್ಲಿ ಕಣಕ್ಕಿಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.

ಬಿಜೆಪಿ ಕಾಂಗ್ರೆಸ್ ತುಷ್ಠೀಕರಣದ ಪಕ್ಷಗಳು. ಒಂದು ಮುಸ್ಲಿಂ ತುಷ್ಠೀಕರಣವಾದರೆ ಮತ್ತೊಂದರದ್ದು ಹಿಂದೂ ತುಷ್ಠೀಕರಣ. ಇವರ ಉದ್ದೇಶವೇ ಅಧಿಕಾರ. ಲೂಟಿ ಮಾಡಬೇಕೆನ್ನುವುದೇ ಇವರ ಗುರಿ ಹೊರತು ಜನಸಾಮಾನ್ಯರ ಅಭಿವೃದ್ಧಿಯಲ್ಲ. ಬಿಜೆಪಿಯವರು 3ನೆ ತಾರೀಕಿನಿಂದ ಜನಸುರಕ್ಷಾ ಯಾತ್ರೆ ಮಾಡುತ್ತಾರೆ. ಇದು ಢೋಂಗಿ ಯಾತ್ರೆ. ಅವರು ಸಾಧ್ಯವಿದ್ದರೆ ಭಟ್ಕಳದಿಂದ ಯಾತ್ರೆ ಆರಂಭಿಸಲಿ. ಬಿಜೆಪಿ ಶಾಸಕ ಚಿತ್ತರಂಜನ್, ತಾಲೂಕು ಅಧ್ಯಕ್ಷ ತಿಮ್ಮಪ್ಪ ನಾಯ್ಕ ಕೊಲೆಯಾಗಿ ವರ್ಷಗಳು ಕಳೆದರೂ ಆರೋಪಿಗಳನ್ನು ಬಂಧಿಸಿಲ್ಲ. ಭಟ್ಕಳದ ಜನರಿಗೆ ಬಿಜೆಪಿ ಉತ್ತರ ಕೊಡಬೇಕು. ಬಿಜೆಪಿಯದ್ದು ಮೋಸ, ಅಧಿಕಾರ ದಾಹದ ಯಾತ್ರೆ ಎಂದವರು ಕಿಡಿಕಾರಿದರು.  

ಬಿಜೆಪಿ ಜೊತೆಗಿನ ಮೈತ್ರಿಯ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಪಕ್ಷದೊಂದಿಗೆ ನಾವು ಮೈತ್ರಿ ಮಾಡಿಕೊಳ್ಳುವುದಿಲ್ಲ. ನಮಗೆ ಹಿಂದೂ ಮಹಾಸಭಾದ ಬೆಂಬಲವಿದೆ. ಶೃಂಗೇರಿ ಅಥವಾ ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ತಾನು ಸ್ಪರ್ಧಿಸಲಿದ್ದೇನೆ. ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಜನರು ಬೇಸರಗೊಂಡಿದ್ದಾರೆ. ದಿಲ್ಲಿಯಲ್ಲಿ ಆಮ್ ಆದ್ಮಿ ಪಕ್ಷ 2 ರಾಷ್ಟ್ರೀಯ ಪಕ್ಷಗಳನ್ನು ಧೂಳೀಪಟ ಮಾಡಿದ ಹಾಗೆ ಕರ್ನಾಟಕದಲ್ಲೂ 3 ಪಕ್ಷಗಳ ದುರಾಡಳಿತ ನೋಡಿದ ಜನರು, ಹೊಸ ವಿಚಾರಧಾರೆಯ ಶಿವಸೇನೆಗೆ ಬೆಂಬಲ ನೀಡಲಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯ ನವೀನ್ ಹಿಂದೂ ಕಾರ್ಯಕರ್ತ. ಅವನ ಮೇಲೆ ಸುಳ್ಳು ಆರೋಪ ಹೊರಿಸಿ ಗೌರಿ ಹಂತಕ ಎಂದಿದ್ದಾರೆ. ಇದೆಲ್ಲಾ ಶುದ್ಧ ಸುಳ್ಳು. ಅವನು ಆ ರೀತಿ ಮಾಡಲು ಸಾಧ್ಯವಿಲ್ಲ. ಕಲಬುರ್ಗಿ ಹಾಗು ಗೌರಿ ಹಂತಕರನ್ನು ಬಂಧಿಸುವಲ್ಲಿ ವಿಫಲ ಎನ್ನುವ ಆರೋಪ ತಪ್ಪಿಸಲು ರಾಜ್ಯ ಸರಕಾರ ಯಾರನ್ನೋ ಹಿಡಿದು ಗೌರಿ ಹಂತಕ ಎನ್ನುತ್ತಿದೆ ಎಂದವರು ಆರೋಪಿಸಿದರು.  

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News