ತ್ರಿಪುರ ವಿಧಾನಸಭೆ ಚುನಾವಣೆ: ಸಮೀಕ್ಷೆಗಳಲ್ಲಿ ಅಸ್ಪಷ್ಟತೆ, ಫಲಿತಾಂಶದ ಬಗ್ಗೆ ಕುತೂಹಲ
ಅಗರ್ತಲ, ಮಾ.1: ವಿವಿಧ ಟಿವಿ ಚಾನೆಲ್‌ಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳಲ್ಲಿ ಸರಿಯಾದ ಚಿತ್ರಣ ದೊರಕದಿರುವ ಕಾರಣ ತ್ರಿಪುರ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಕುತೂಹಲ ಹೆಚ್ಚಿದೆ.
60 ಸದಸ್ಯರ ತ್ರಿಪುರ ವಿಧಾನಸಭೆಯ 59 ಸ್ಥಾನಗಳಿಗೆ ಫೆ.18ರಂದು ಚುನಾವಣೆ ನಡೆದಿದ್ದು ಮಾರ್ಚ್ 3ರಂದು ಫಲಿತಾಂಶ ಹೊರಬೀಳಲಿದೆ. ಸಿಪಿಐ(ಎಂ) ಅಭ್ಯರ್ಥಿ ನಿಧನವಾದ ಹಿನ್ನೆಲೆಯಲ್ಲಿ ಒಂದು ಸ್ಥಾನಕ್ಕೆ ಮಾರ್ಚ್ 12ರಂದು ಚುನಾವಣೆ ನಡೆಯಲಿದೆ.
‘ನ್ಯೂಸ್ ಎಕ್ಸ್’ ಎಂಬ ಟಿವಿ ಚಾನೆಲ್ ತ್ರಿಪುರಾದಲ್ಲಿ ಬಿಜೆಪಿ ಮೈತ್ರಿಕೂಟ ಎಡಪಕ್ಷಗಳ 25 ವರ್ಷದ ಆಡಳಿತಕ್ಕೆ ಅಂತ್ಯಹಾಡಿ ಅಧಿಕಾರ ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಬಿಜೆಪಿ ಮೈತ್ರಿಕೂಟಕ್ಕೆ 35ರಿಂದ 45 ಸ್ಥಾನ, ಎಡರಂಗಕ್ಕೆ 14ರಿಂದ 23 ಸ್ಥಾನ, ಇತರರಿಗೆ 1 ಸ್ಥಾನ ಸಿಗಲಿದೆ ಎಂದು ಅಂದಾಜಿಸಿದೆ. ಇನ್ನೊಂದೆಡೆ, ದಿಲ್ಲಿ ಮೂಲದ ‘ಸಿವೋಟರ್’ ಏಜೆನ್ಸಿ ತ್ರಿಪುರಾದಲ್ಲಿ ನಿಕಟ ಸ್ಪರ್ಧೆ ನಡೆಯಲಿದ್ದು ಸಿಪಿಐ(ಎಂ) ಮತ್ತು ಎಡಪಕ್ಷಗಳು ಶೇ.44.3ರಷ್ಟು ಮತ ಗಳಿಸಿ 26ರಿಂದ 34 ಸ್ಥಾನ ಪಡೆಯಲಿವೆ. ಬಿಜೆಪಿ ಮೈತ್ರಿಕೂಟಕ್ಕೆ 24-32(ಶೇ.42.8 ಮತ), ಕಾಂಗ್ರೆಸ್‌ಗೆ 2(ಶೇ.7.2 ಮತ) ಸ್ಥಾನ ದೊರಕಲಿದೆ ಎಂದು ಭವಿಷ್ಯ ನುಡಿದಿದೆ.
ತ್ರಿಪುರಾದಲ್ಲಿ ಸುಮಾರು 10 ಲಕ್ಷದಷ್ಟಿರುವ ಆದಿವಾಸಿಗಳು ಬಳಸುತ್ತಿರುವ ಕೋಕ್‌ಬರಾಕ್ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ‘ಕೋಕ್ ತ್ರಿಪುರ’ ಎಂಬ ಟಿವಿ ವಾಹಿನಿಯ ಪ್ರಕಾರ ತ್ರಿಪುರಾದಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲಾಗಿರುವ 20 ಕ್ಷೇತ್ರಗಳಲ್ಲಿ ಬಿಜೆಪಿ 13ರಿಂದ 16, ಎಡಪಕ್ಷಗಳು 4ರಿಂದ 7 ಸ್ಥಾನ ಗೆಲ್ಲಬಹುದು . ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಟಿಎಂಸಿ ಹಾಗೂ ಇತರರಿಗೆ ಅಸ್ತಿತ್ವವೇ ಇಲ್ಲ ಎಂದು ಚಾನೆಲ್ ತಿಳಿಸಿದೆ.
ಇನ್ನೊಂದು ಸ್ಥಳೀಯ ಟಿವಿ ವಾಹಿನಿ ‘ದಿನ್‌ರಾತ್’, ರಾಜ್ಯದಲ್ಲಿ ಎಡರಂಗ ಕನಿಷ್ಟ 40 ಸ್ಥಾನ, ಗರಿಷ್ಟ 49 ಸ್ಥಾನ, ಬಿಜೆಪಿ ಹಾಗೂ ಐಪಿಎಫ್‌ಟಿ ಮೈತ್ರಿಕೂಟ 10ರಿಂದ 19 ಸ್ಥಾನ ಪಡೆಯಲಿದೆ. 20 ಮೀಸಲು ಕ್ಷೇತ್ರಗಳಲ್ಲಿ ಎಡಪಕ್ಷಗಳು 15 ಸ್ಥಾನ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ.
ಇನ್ನೊಂದು ಸ್ಥಳೀಯ ಚಾನೆಲ್ ‘ಹೆಡ್‌ಲೈನ್’, ಬಿಜೆಪಿ -ಐಪಿಎಫ್‌ಟಿ ಮೈತ್ರಿಕೂಟ ಒಟ್ಟು ಶೇ.54ರಷ್ಟು ಮತಗಳನ್ನು ಗಳಿಸಿ ಅಧಿಕಾರ ಪಡೆಯಲಿದೆ ಎಂದು ತಿಳಿಸಿದೆ. ಆದರೆ ಮೈತ್ರಿಕೂಟಕ್ಕೆ ಒಟ್ಟು ಎಷ್ಟು ಸ್ಥಾನ ದೊರಕಲಿದೆ ಎಂದು ತಿಳಿಸಿಲ್ಲ.
ಮತದಾನೋತ್ತರ ಸಮೀಕ್ಷೆಗಳು ಕೇವಲ ಊಹೆಯಾಗಿದೆ . ಮಾರ್ಚ್ 3ರಂದು ಫಲಿತಾಂಶ ಹೊರಬಿದ್ದ ಬಳಿಕ ತಮ್ಮ ಪಕ್ಷ ಹೇಳಿಕೆ ನೀಡಲಿದೆ ಎಂದು ಸಿಪಿಐ(ಎಂ) ವಕ್ತಾರ ಗೌತಮ್ ದಾಸ್ ಪ್ರತಿಕ್ರಿಯಿಸಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳು ಯಾವಾಗಲೂ ಸತ್ಯವಾಗಿರುವುದಿಲ್ಲ ಎಂದು ಹೇಳಿರುವ ಬಿಜೆಪಿಯ ರಾಜ್ಯ ಉಸ್ತುವಾರಿ ಸುನಿಲ್ ದಿಯೋಧರ್, ತಮ್ಮ ಮೈತ್ರಿಕೂಟ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತದಾನೋತ್ತರ ಸಮೀಕ್ಷೆಗಳನ್ನು ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಲಾಗುತ್ತದೆ. ಒಂದು ಸಮೀಕ್ಷೆಯಲ್ಲಿ ಬಿಜೆಪಿಗೆ ಗೆಲುವು ಎಂದು ಹೇಳಿದರೆ, ಇನ್ನೊಂದರಲ್ಲಿ ಎಡಪಕ್ಷಗಳಿಗೆ ಗೆಲುವು ಎನ್ನಲಾಗಿದೆ. ಆದರೂ ಸಿಪಿಐ(ಎಂ) ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳುವ ಲಕ್ಷಣ ಕಂಡುಬರುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಉಪಾಧ್ಯಕ್ಷ ತಪಸ್ ದಾಸ್ ಹೇಳಿದ್ದಾರೆ.