ಹೋಲಿ ಆಚರಣೆ: ವೀರ್ಯ ತುಂಬಿದ ಬಲೂನುಗಳನ್ನು ವಿದ್ಯಾರ್ಥಿಗಳ ಮೇಲೆಸೆದ ದುಷ್ಕರ್ಮಿಗಳು
ಹೊಸದಿಲ್ಲಿ, ಮಾ.1: ಬಣ್ಣದ ಹಬ್ಬ ಹೋಲಿ ಆಚರಣೆಯ ನೆಪದಲ್ಲಿ ಕೆಲವು ದುಷ್ಕರ್ಮಿಗಳು ವೀರ್ಯ ತುಂಬಿದ ಬಲೂನುಗಳನ್ನು ವಿದ್ಯಾರ್ಥಿಗಳ ಮೇಲೆಸೆದು ವಿಕೃತಿ ಮೆರೆದ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ಈ ಕುರಿತು ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು ತಮ್ಮ ಮೇಲೆ ವೀರ್ಯ ತುಂಬಿದ ಬಲೂನುಗಳನ್ನು ಎಸೆಯಲಾಗಿದೆ ಎಂದು ದೂರಿದ್ದಾರೆ.
ಘಟನೆಯನ್ನು ವಿರೋಧಿಸಿ ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ದಿಲ್ಲಿ ಪೊಲೀಸ್ ಮುಖ್ಯಕಚೇರಿಯ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ವಿದ್ಯಾರ್ಥಿನಿಯರಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೋಲಿ ಆಚರಣೆಯ ನೆಪದಲ್ಲಿ ಮಹಿಳೆಯರಿಗೆ ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಕಾಲೇಜುಗಳ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆ ಮನಃಶಾಸ್ತ್ರ ಕಲಿಯುವ ವಿದ್ಯಾರ್ಥಿನಿಯೊಬ್ಬಳು, ತನ್ನ ಮೇಲೆ ವೀರ್ಯ ತುಂಬಿದ ಬಲೂನು ಎಸೆದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿದ್ದಳು. ಮೊದಲಿಗೆ ಆ ಬಲೂನಿನ ಒಳಗಿದ್ದ ದ್ರವದ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಆದರೆ ನಂತರ ಗೆಳತಿಯೊಬ್ಬಳು, ಈ ಬಾರಿ ಹೋಲಿ ಸಂದರ್ಭದಲ್ಲಿ ವೀರ್ಯ ತುಂಬಿದ ಬಲೂನು ಎಸೆಯುವುದೇ ಟ್ರೆಂಡ್ ಆಗಿದೆ ಎಂದು ಹೇಳಿದಾಗಲೇ ವಿಷಯದ ಅರಿವಾಗಿತ್ತು ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಾಳೆ.
ಇದಾದ ನಂತರ ಹಲವು ಇಂಥ ಘಟನೆಗಳು ವರದಿಯಾಗಿದ್ದು ಪೊಲೀಸರು ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.