ಪಿಎನ್‌ಬಿ ವಂಚನೆ: ಮೆಹುಲ್ ಚೋಕ್ಸಿಯ 1,217 ಕೋಟಿ ರೂ. ಆಸ್ತಿ ಜಪ್ತಿ
ಹೊಸದಿಲ್ಲಿ, ಮಾ.1: ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಗೀತಾಂಜಲಿ ಜೆಮ್ಸ್ ಮಾಲಕ ಮೆಹುಲ್ ಚೋಕ್ಸಿಗೆ ಸೇರಿದ 1,217 ಕೋಟಿ ರೂ. ಮೌಲ್ಯದ 41 ಆಸ್ತಿಗಳನ್ನು ಜಪ್ತಿ ಮಾಡಿರುವುದಾಗಿ ಆಂಗ್ಲ ಪತ್ರಿಕೆ ವರದಿ ಮಾಡಿದೆ. ಮುಂಬೈಯಲ್ಲಿ 15 ಫ್ಲ್ಯಾಟ್‌ಗಳು, 17 ಕಚೇರಿಗಳು, ಕೊಲ್ಕತ್ತಾದ ಮಾಲ್, ಅಲಿಬಾಗ್‌ನಲ್ಲಿ ನಾಲ್ಕು ಎಕರೆ ಫಾರ್ಮ್‌ಹೌಸ್ ಹಾಗೂ ನಾಸಿಕ್, ನಾಗ್ಪುರ, ಪನ್ವೆಲ್ ಮತ್ತು ತಮಿಳುನಾಡಿನ ವಿಲ್ಲುಪುರಂ ಮುಂತಾದೆಡೆಗಳಲ್ಲಿ 231 ಎಕರೆ ಜಮೀನನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ವರದಿ ತಿಳಿಸಿದೆ. ಜೊತೆಗೆ ಹೈದರಾಬಾದ್‌ನ ರಂಗ ರೆಡ್ಡಿ ಜಿಲ್ಲೆಯಲ್ಲಿರುವ 500 ಕೋಟಿ ರೂ. ಗೂ ಅಧಿಕ ಮೌಲ್ಯದ 170 ಎಕರೆಯ ಉದ್ಯಾನವನವನ್ನೂ ಮುಟ್ಟುಗೋಲು ಹಾಕಲಾಗಿದೆ ಎಂದು ವರದಿ ಮಾಡಲಾಗಿದೆ. ಮೆಹುಲ್ ಚೋಕ್ಸಿ ಮತ್ತು ವಜ್ರಾಭರಣ ತಯಾರಕ ನೀರವ್ ಮೋದಿ ಜೊತೆಯಾಗಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 12,000 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಂಚಿಸಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಪಿಎನ್‌ಬಿಯ ಮುಂಬೈ ಶಾಖೆಯ ಕೆಲವು ಅಧಿಕಾರಿಗಳನ್ನು ಬಂಧಿಸಲಾಗಿದೆ.