ಮುಸ್ಲಿಮರ ಒಂದು ಕೈಯಲ್ಲಿ ಕುರ್‌ಆನ್,ಇನ್ನೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು: ಪ್ರಧಾನಿ

Update: 2018-03-01 14:08 GMT

ಹೊಸದಿಲ್ಲಿ, ಮಾ. 1: ಮುಸ್ಲಿಮರ ಒಂದು ಕೈಯಲ್ಲಿ ಕುರ್‌ಆನ್, ಇನ್ನೊಂದು ಕೈಯಲ್ಲಿ ಕಂಪ್ಯೂಟರ್ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ‘ಇಸ್ಲಾಮಿಕ್ ಹೆರಿಟೇಜ್: ಪ್ರಮೋಟಿಂಗ್ ಅಂಡರ್‌ಸ್ಟ್ಯಾಂಡಿಂಗ್ ಆ್ಯಂಡ್ ಮಾಡರೇಶನ್’ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಜೋರ್ಡಾನ್‌ನ ಎರಡನೇ ದೊರೆ ಅಬ್ದುಲ್ಲಾ ಇಹ್ನ ಅಲ್ ಹುಸೈನ್ ಕೂಡ ಉಪಸ್ಥಿತರಿದ್ದರು.

ಭಯೋತ್ಪಾದನೆ ಹಾಗೂ ತೀವ್ರವಾದದ ವಿರುದ್ಧದ ಹೋರಾಟ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಪ್ರತಿ ಧರ್ಮವೂ ಮಾನವ ಮೌಲ್ಯವನ್ನು ಉತ್ತೇಜಿಸುತ್ತದೆ ಎಂದು ಪ್ರಧಾನಿ ಅವರು ತಿಳಿಸಿದರು.

ಉಗ್ರವಾದದ ವಿರುದ್ಧ ಭಾರತೀಯ ಸಮಾಜದ ಬಹುತ್ವದ ಪರಂಪರೆ ಹಾಗೂ ವೈವಿಧ್ಯತೆಯ ಸತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಭಾರತವು ಜಗತ್ತಿನ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲು ಎಂದ ಪ್ರಧಾನಿ, ಭಾರತದ ಪ್ರಜಾಪ್ರಭುತ್ವ ಪ್ರಾಚೀನ ಬಹುತ್ವವನ್ನು ಆರಾಧಿಸುತ್ತದೆ ಎಂದರು.

 ಯುವಕರು ಇಸ್ಲಾಂನ ಮಾನವೀಯತೆಯ ಅಂಶ ಅಳವಡಿಸಿಕೊಳ್ಳಬೇಕು ಹಾಗೂ ಆಧುನಿಕ ತಂತ್ರಜ್ಞಾನ ಬಳಸಲು ಸಮರ್ಥರಾಗಬೇಕು ಎಂದು ಅವರು ಹೇಳಿದರು. ಧರ್ಮದ ಬಗ್ಗೆ ತನ್ನ ನಿಲುವು ಹಂಚಿಕೊಂಡ ಜೋರ್ಡಾನ್‌ನ 2ನೇ ದೊರೆ ಅಬ್ದುಲ್ಲಾ, ಧರ್ಮದ ಹೆಸರಿನಲ್ಲಿ ದಾಳಿ, ಧರ್ಮದ ಮೇಲಿನ ದಾಳಿ. ಧರ್ಮದ ಹೆಸರಿನಲ್ಲಿ ಹರಡುತ್ತಿರುವ ದ್ವೇಷವನ್ನು ನಾವು ಗುರುತಿಸಬೇಕು ಹಾಗೂ ತಿರಸ್ಕರಿಸಬೇಕು. ದ್ವೇಷ ಹರಡುವ ಇಂಟರ್‌ನೆಟ್ ಹಾಗೂ ಇತರ ವೇದಿಕೆಗಳನ್ನು ತಿರಸ್ಕರಿಸಬೇಕು ಎಂದರು. ನಂಬಿಕೆ ನಮ್ಮ ಬೆಳವಣಿಗೆಗೆ ಅವಕಾಶ ನೀಡುತ್ತದೆ ಎಂದ ಅವರು, ದ್ವೇಷ ಹರಡುವ ಧ್ವನಿಗಳನ್ನು ತಿರಸ್ಕರಿಸಬೇಕು ಎಂದು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News