‘ಕುಥಿಯೊಟ್ಟಂ’ ಆಚರಣೆ ವಿರುದ್ಧ ಕೇರಳ ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದ ಪ್ರಕರಣ ದಾಖಲು
ತಿರುವನಂತಪುರಂ, ಮಾ. 1: ಆಟುಕ್ಕಳ ಪೊಂಗಲ್ ಉತ್ಸವದ ಸಂದರ್ಭದ ‘ಕುಥಿಯೊಟ್ಟಂ’ ಆಚರಣೆ ವಿರುದ್ಧ ಕೇರಳ ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಪ್ರಕರಣ ದಾಖಲಿಸಿಕೊಂಡಿದೆ.
ಮಾಧ್ಯಮಗಳ ವರದಿ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೊಂಗಲ್ ಉತ್ಸವದ ಒಂದು ಭಾಗವಾಗಿ ‘ಕುಥಿಯೊಟ್ಟಂ’ ಆಚರಿಸಲಾಗುತ್ತದೆ. ಈ ಆಚರಣೆಯ ಅಂತ್ಯದಲ್ಲಿ ಬಾಲಕರ ದೇಹಕ್ಕೆ ಕೊಕ್ಕೆಗಳನ್ನು ಚುಚ್ಚಲಾಗುತ್ತದೆ ಎಂದು ಜಿಡಿಪಿ (ಕಾರಾಗೃಹ) ಆರ್. ಶ್ರೀಲೇಕಾ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆಚರಣೆಯ ಸಂದರ್ಭ ಮಕ್ಕಳ ಹಕ್ಕುಗಳ ಉಲ್ಲಂಘನೆ ನಡೆದಿದೆಯೇ ಎಂಬ ಬಗ್ಗೆ ಆಯೋಗ ಪರಿಶೀಲನೆ ನಡೆಸುತ್ತಿದೆ. ಶ್ರೀಲೇಖಾ ಅವರು ತಮ್ಮ ಬ್ಲಾಗ್‌ನಲ್ಲಿ ‘ನಂಬಿಕೆ ಹೆಸರಲ್ಲಿ ಪ್ರತಿವರ್ಷದ ಅಪರಾಧ ನಿಲ್ಲಿಸುವ ಕಾಲ ಬಂದಿದೆ’ ಎಂಬ ಲೇಖನ ಪ್ರಕಟವಾದ ಬಳಿಕ ಈ ಬೆಳವಣಿಗೆ ನಡೆದಿದೆ. ನಿರ್ದಿಷ್ಟ ಪ್ರಾಯದ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ. ಆದರೆ, ಈ ಮಕ್ಕಳ ಬಗ್ಗೆ ಏನು ಹೇಳುತ್ತೀರಿ? ನಾವು ಇದನ್ನು ಬಾಲಕರ ಕಾರಾಗೃಹದ ಸೆಲ್ ಎಂದು ಕರೆಯಬಹುದೇ ? ಎಂದು ಅವರು ಲೇಖನದಲ್ಲಿ ಪ್ರಶ್ನಿಸಿದ್ದರು.
ಗುರುವಾರ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, ‘ಇದು ಭೀಭತ್ಸ’ ಎಂದು ಹೇಳಿದ್ದಾರೆ ಹಾಗೂ ಈ ಆಚರಣೆಯನ್ನು ಖಂಡಿಸಿದ್ದಾರೆ.
ಈ ಭೀಬತ್ಸ ಆಚರಣೆ ರದ್ದುಗೊಳಿಸಲು ನಾನು ಬಯಸುತ್ತೇನೆ. ನನ್ನ ನಿಲುವಿಗೆ ನಾನು ಬದ್ಧವಾಗಿದ್ದೇನೆ. ದೇವಾಲಯದ ಆಡಳಿತ ಮಂಡಳಿ ಬಗ್ಗೆ ಭಯ ಪಡಲಾರೆ ಎಂದು ಶ್ರೀಲೇಖಾ ಹೇಳಿದ್ದಾರೆ.