10 ವರ್ಷಗಳ ಹಿಂದೆ ಇದೇ ವೇದಿಕೆಯಲ್ಲಿ ಸೆಲೆಬ್ರಿಟಿಯಾಗುವ ಕನಸು ಕಂಡಿದ್ದೆ: ಚಂದನ್ ಶೆಟ್ಟಿ
ಪುತ್ತೂರು, ಮಾ. 1: ದೈಹಿಕವಾಗಿ ನಾನು ಮೂವ್ ಆದರೂ ನನ್ನ ಪ್ರೆಸೆನ್ಸ್ ಮಾತ್ರ ಫಿಲೋಮಿನಾ ಕಾಲೇಜ್‌ನಲ್ಲಿ ಅನುಭವಿಸಿದ ಅದ್ಭುತ ಕ್ಷಣಗಳಲ್ಲಿವೆ. ಕಾಲೇಜಿನ ಸಿಲ್ವರ್ ಜ್ಯುಬಿಲಿ ಸಭಾಂಗಣದಲ್ಲಿ ಹತ್ತು ವರ್ಷದ ಹಿಂದೆ ಪ್ರಥಮವಾಗಿ ಹಾಡಿದ್ದೆ. ಆಗ ನಾನು ಹಾಡುಗಾರ ಆಗುತ್ತೇನೆಂದು ನನಗೇ ಗೊತ್ತಿರಲಿಲ್ಲ. ಆದರೆ ಲಾರ್ಡ್ ಜೀಸಸ್ ನನ್ನನ್ನು ಆಶೀರ್ವದಿಸಿ, ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ. ಅಂದು ನಾನು ಹಾಡಿದ ಪದ್ಯಕ್ಕೆ ಮೊದಲ ರ್ಯಾಪರ್ ಪ್ರಶಸ್ತಿ ಸಿಕ್ಕಿದ್ದು ನನಗೆ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ಬಿಗ್‌ಬಾಸ್ 5ನೆ ಆವೃತ್ತಿಯ ವಿನ್ನರ್ ಕನ್ನಡ ರ್ಯಾಪರ್, ಸಂಗೀತ ನಿರ್ದೇಶಕ, ಕಾಲೇಜಿನ ಹಳೆ ವಿದ್ಯಾರ್ಥಿ ‘ಬಿಗ್‌ಬಾಸ್’ ಚಂದನ್ ಶೆಟ್ಟಿ ಅವರು ಹೇಳಿದರು.
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಭಿಮಾನಿಗಳ ನೂಕು-ನುಗ್ಗಲಿನ ನಡುವೆ ವೇದಿಕೆ ಏರಿದ ಅವರು ಎಲ್ಲರೂ ಕುಳಿತುಕೊಳ್ಳಿ, ನಾನು ನನ್ನ ಕಾಲೇಜಿಗೆ ಬಂದಿದ್ದೇನೆ. ಇದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. 10 ವರ್ಷದ ಹಿಂದೆ ಸೆಲೆಬ್ರಿಟಿ ಆಗುತ್ತೇನೆಂದು ಇದೇ ವೇದಿಕೆಯಲ್ಲಿ ಕನಸು ಕಂಡವನು ನಾನಾಗಿದ್ದೇನೆ .ಫಿಲೋಮಿನಾದಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿ ಹಲವಾರು ಸಹಪಾಠಿಗಳು ಇದ್ದರು. ಪ್ರಸ್ತುತ ನನ್ನೊಂದಿಗೆ ಅನೇಕ ಅಭಿಮಾನಿಗಳಿದ್ದರೂ, ನಾನು ರೋಶನ್ ಗೊನ್ಸಾಲ್ವಿಸ್ ಮತ್ತಿತರ ಸಹಪಾಠಿಗಳನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಇಲ್ಲಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡ ಸಂದರ್ಭದಲ್ಲಿ ತಾನು ಉಳಿದುಕೊಂಡಿದ್ದ ರೂಂಗೆ ಹೋಗಬೇಕು, ಆ ರೂಂನಲ್ಲಿ ವಿಶ್ರಾಂತಿ ಪಡೆಯಬೇಕು ಎನ್ನುವ ಅಭಿಲಾಷೆ ನನ್ನಲ್ಲಿದೆ. ಕಾರ್ಯಕ್ರಮ ಮುಗಿದ ಬಳಿಕ ಹಾಸ್ಟೆಲ್‌ಗೆ ತೆರಳಲಿದ್ದೇನೆ ಎಂದು ಹೇಳುವ ಮೂಲಕ ಅವರು ಕಾಲೇಜು ಪ್ರೇಮ ಮೆರೆದರು.
ಸೆಲ್ಫಿಗೆ ಮುಗಿಬಿದ್ದ ಅಭಿಮಾನಿಗಳು
ಮಂಗಳೂರಿನಿಂದ ಕಾರಿನಲ್ಲಿ ಪುತ್ತೂರು ನಗರದ ದರ್ಬೆಗೆ ಆಗಮಿಸಿದ ಚಂದನ್ ಶೆಟ್ಟಿ ಅವರು ಬಳಿಕ ಎರಡು ತೆರೆದ ಜೀಪುಗಳಲ್ಲಿದ್ದ ತನ್ನ ಕಾಲೇಜು ಸಹಪಾಠಿ ರೋಶನ್ ಗೊನ್ಸಾಲ್ವಿಸ್ ಹಾಗೂ ಇತರರ ಜೊತೆ ದರ್ಬೆಯಿಂದ ಫಿಲೋಮಿನಾ ಕ್ಯಾಂಪಸ್‌ಗೆ ಕಾರಿನಲ್ಲಿ ಅಭಿಮಾನಿಗಳತ್ತ ಕೈ ಬೀಸುತ್ತಾ ಬಂದು ಕಾಲೇಜು ಕ್ಯಾಂಪಸ್‌ಗೆ ಬಿಗ್ ಎಂಟ್ರಿ ಕೊಟ್ಟರು. ವೇದಿಕೆಗೆ ಆಗಮಿಸಿದ್ದಂತೇ ಚಂದನ್ ಶೆಟ್ಟಿ ಅವರು ತನ್ನ ಇಷ್ಟವಾದ ರ್ಯಾಪ್ ಪದ್ಯವನ್ನು ಹಾಡಿ ಹವಾ ಎಬ್ಬಿಸಿದರು. ಈ ಸಂದರ್ಭ ಸೆಲೆಬ್ರಿಟಿಯೊಂದಿಗೆ ಸೆಲ್ಫಿಗೆ ಮುಗಿಬಿದ್ದರು. ಕೆಲವರಂತೂ ವೇದಿಕೆಗೆ ನುಗ್ಗಿದ ಘಟನೆಯೂ ನಡೆಯಿತು.
ಕುರ್ಚಿ ಮೇಲೆ ನಿಂತು ಡ್ಯಾನ್ಸ್
ಸಭಾ ಕಾರ್ಯಕ್ರಮದ ಕೊನೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳತ್ತ ತಿರುಗಿ ನಿಮಗೆ ‘ಮೂರೇ ಮೂರು ಪೆಗ್ಗಿಗೆ ’ ಹಾಡು ಇಲ್ಲಾ ‘ಟಕೀಲ’ ಹಾಡು ಇದರಲ್ಲಿ ಯಾವ ಹಾಡನ್ನು ಮೊದಲು ಹಾಡಬೇಕು ಎಂದು ಹೇಳಿದರು. ಅಭಿಮಾನಿಗಳು ಮೂರೇ ಮೂರು ಪೆಗ್ಗಿಗೆ ಎಂದು ಹೇಳಿದಾಗ ಚಂದನ್ ಅವರು ಮೂರೇ ಮೂರು ಪೆಗ್ಗಿಗೆ ಹಾಡನ್ನು ಹಾಡಿ, ಬಳಿಕ ಟಕೀಲ ಹಾಡನ್ನೂ ಹಾಡಿ ಅಭಿಮಾನಿಗಳನ್ನು ರಂಜಿಸಿದರು.
ಈ ಸಂದರ್ಭದಲ್ಲಿ ಚಂದನ್ ಅವರ ಹಾಡಿನ ಮೋಡಿಗೆ ಭಾವಪರಾವಶರಾದ ಯುವಕ -ಯುವತಿಯರು ತಾವು ಕುಳಿತ ಕುರ್ಚಿ ಮೇಲೆ ನಿಂತು ಕೈಯಲ್ಲಿದ್ದ ಮೊಬೈಲ್ ಫೋನಿನಿಂದ ಚಿತ್ರೀಕರಣ ಮಾಡುತ್ತಾ ಡ್ಯಾನ್ಸ್ ಮಾಡಿದರು. ಕ್ರೀಡಾ ಸಾಧನೆಗಾಗಿ ಚಂದನ್ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸಿದ ಯುವತಿಯೊಬ್ಬಳು ಸಂಭ್ರಮಿಸಿದ ಪರಿಯೇ ಚಂದನ್ ಕ್ರೇಜ್‌ಗೆ ಸಾಕ್ಷಿಯಾಗಿತ್ತು.
ಚಂದನ್ ಶೆಟ್ಟಿ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಂದರ್ಭ ಪ್ರಾಂಶುಪಾಲರಾಗಿದ್ದು, ಪ್ರಸ್ತುತ ವೃತ್ತಿಯಿಂದ ನಿವೃತ್ತರಾಗಿರುವ ಸಂಖ್ಯಾಶಾಸ್ತ್ರ ಉಪನ್ಯಾಸಕ ಪ್ರೊ. ಜನಾರ್ದನ ಹೆರ್ಲೆ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಕಾಲೇಜಿನ ಸಂಚಾಲಕ ಆಲ್ಫ್ರೆಡ್ ಜೆ ಪಿಂಟೊ ಅವರು ಅಧ್ಯಕ್ಷತೆ ವಹಿಸಿದ್ದರು. ಎಲ್ಲರೂ ಪ್ರತಿಭಾವಂತರೇ. ಆದರೆ ಚಂದನ್ ಅವರಿಂದಾಗಿ ಈ ಕಾರ್ಯಕ್ರಮಕ್ಕೆ ಕಳೆ ಬಂದು, ರಿಯಾಲಿಟಿ ಕಾರ್ಯಕ್ರಮವಾಗಿ ಪರಿಣಮಿಸಿದಂತಾಗಿದೆ ಎಂದರು. ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಆ್ಯಂಟನಿ ಪ್ರಕಾಶ್ ಮೊಂತೇರೊ, ಕಾಲೇಜಿನ ಪ್ರಾಂಶುಪಾಲ ಪ್ರೊಲಿಯೋ ನೊರೊನ್ಹಾ ಅವರು ಮಾತನಾಡಿದರು.
ಸನ್ಮಾನ-ಅಭಿನಂದನೆ
ಚಂದನ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರೊ. ಜನಾರ್ದನ ಹೆರ್ಲೆ ಮತ್ತು ಕೆಮಿಸ್ಟ್ರೀ ವಿಭಾಗದಲ್ಲಿ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜೋಸೆಫ್ ಡಿ’ಸೋಜ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರಿಚಯವನ್ನು ಪ್ರಾಧ್ಯಾಪಕ ಪ್ರೊ. ಎಡ್ವಿನ್ ಡಿ’ಸೋಜ ಅವರು ನೀಡಿದರು.
ಕಳೆದ ಸಾಲಿನ ಪಿಯು ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾದ ವಿಜ್ಞಾನ ವಿಭಾಗದ ಆಯಿಷತ್ ಶಮೀಮಾ, ವಾಣಿಜ್ಯ ವಿಭಾಗದ ನಿಶಾ ಭಟ್, ಕಲಾ ವಿಭಾಗದ ಡಿಂಪಲ್ ಮಿಶಲ್ ತಾವ್ರೋ ಅವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಪದವಿ ಪರೀಕ್ಷೆಗಳಲ್ಲಿ ಬಿಎಸ್ಸಿಯಲ್ಲಿ 5ನೆ ರ್ಯಾಂಕ್ ಪಡೆದ ಫಿಯೋನಾ ಕ್ರಿಸ್ಟಲ್ ಮಸ್ಕರೇನಸ್, ಬಿಎಸ್ಸಿಯಲ್ಲಿ 7ನೆ ರ್ಯಾಂಕ್ ಗಳಿಸಿದ ರಮ್ಯಶ್ರೀ ಕೆ., ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ ಪವಿತ್ರ ಜಿ., ವಾಣಿಜ್ಯ ಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ಪ್ರೀತಿ ಎನ್.ಅವರನ್ನು ಸನ್ಮಾನಿಸಲಾಯಿತು.
ದೆಹಲಿಯ ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ದ್ವಿತೀಯ ಬಾರಿ ಭಾಗವಹಿಸಿದ ಹೆಗ್ಗಳಿಕೆ ಹೊಂದಿರುವ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಜೊವಿನ್ ಜೋಸೆಫ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಜಯ್ ಲೋಬೋ, ಪದವಿ ಕಾಲೇಜ್‌ನ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಲಾರೆನ್ಸ್ ಲೋಬೋ ಇದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಡಾ. ವಿಜಯಕುಮಾರ್ ಮೊಳೆಯಾರ್ ವಂದಿಸಿದರು. ಹಿರಿಯ ವಿದ್ಯಾರ್ಥಿನಿ ಮನೋರಮಾ ನಿರೂಪಿಸಿದರು.