ಹುಬ್ಬಳ್ಳಿ- ಬೆಳಗಾವಿಯಲ್ಲೂ 3 ಡಿ ತಾರಾಲಯ: ಸಚಿವ ಎಂ.ಆರ್. ಸೀತಾರಾಂ
ಮಂಗಳೂರು, ಮಾ.1: ಭಾರತದ ಪ್ರಥಮ ತ್ರಿಡಿ 8 ಕೆ ತಾರಾಲಯ ಮಂಗಳೂರಿನಲ್ಲಿ ಇಂದು ಉದ್ಘಾಟನೆಗೊಂಡಿದ್ದು, ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲೂ 3ತ್ರಿಡಿ ತಾರಾಲಯ ನಿರ್ಮಾಣವಾಗಲಿದೆ ಎಂದು ರಾಜ್ಯದ ಯೋಜನೆ, ಸಾಂಖ್ಯಿಕ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್. ಸೀತಾರಾಂ ತಿಳಿಸಿದರು.
ಭಾರತದ ಪ್ರಥಮ ತ್ರಿಡಿ ತಾರಾಲಯದ ಉದ್ಘಾಟನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ತ್ರಿಡಿ ತಾರಾಲಯದ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, 22 ಕೋಟಿ ರೂ. ಬಿಡುಗಡೆ ಆಗಿದೆ. ಬೆಳಗಾವಿಯಲ್ಲಿ ಕಟ್ಟಡ ನಿರ್ಮಾಣ ಪ್ರಾರಂಭಿಕ ಹಂತದಲ್ಲಿದ್ದು, 3 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ವಿಜ್ಞಾನದ ಮಹತ್ವವನ್ನು ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ಸೇರಿದಂತೆ ಐದು ಕಡೆ ಮೊಬೈಲ್ ತಾರಾಲಯಗಳ ಮೂಲಕ ಶಾಲಾ ಮಕ್ಕಳಿಗೆ ವಿಜ್ಞಾನದ ಮಾಹಿತಿಯನ್ನು ಒದಗಿಸುತ್ತಿದೆ. ಇನ್ನೂ 7 ಮೊಬೈಲ್ ತಾರಾಲಯಗಳನ್ನು ಒದಗಿಸಲು ಕ್ರಮ ವಹಿಸಲಾಗಿದೆ. ಪ್ರಸ್ತುತ ಧಾರವಾಡ, ಮಂಗಳೂರು ಹಾಗೂ ಮೈಸೂರಿನಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳಿವೆ. ಬೀದರ್, ಬಳ್ಳಾರಿ, ಆಯಚೂರು, ಕಾರವಾರಗಳಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಚಿಕ್ಕಬಳ್ಳಾಪುರ, ಗೌರಿಬಿದನೂರು, ಕೊಪ್ಪಳ, ಹಾವೇರಿ, ಬಾಗಲಕೋಟೆ, ದಾವಣಗೆರೆ ಹಾಗೂ ಗದಗ ಜಿಲ್ಲೆಗಳಲ್ಲಿ ಉಪ ಪ್ರಾದೇಶಿಕ ಕೇಂದ್ರಗಳು ನಿರ್ಮಾಣ ಹಂತದಲ್ಲಿವೆ. ಮಂಡ್ಯ, ಕೋಲಾರ, ಚಿತ್ರದುರ್ಗ, ರಾಮನಗರ, ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳಿಗೂ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಮಂಜೂರಾಗಿವೆ ಎಂದು ಅವರು ಹೇಳಿದರು.
ಮಾಜಿ ಶಾಸಕ ಯೋಗೀಶ್ ಭಟ್‌ರವರು ತಾರಾಲಯಕ್ಕೆ ಸಂಬಂಧಿಸಿ ಪತ್ರಿಕಾಗೋಷ್ಠಿಯಲ್ಲಿ ನೀಡಿರುವ ಹೇಳಿಕೆ ಅಚ್ಚರಿ ತಂದಿದೆ. 2013ರವರೆಗೆ 8 ಕೋಟಿ ರೂ.ಗಳ ಬಿಡುಗಡೆಯೊಂದಿಗೆ 3ಡಿ ತಾರಾಲಯದ ಮಂಜೂರಾತಿ ಪ್ರಕ್ರಿಯೆ ಕಾಗದಪತ್ರಕ್ಕೆ ಮಾತ್ರವೇ ಸೀಮಿತವಾಗಿತ್ತು. ಅವರು ಶಾಸಕರಾಗಿದ್ದಾಗ ಯೋಜನೆ ಮಂಜೂರು ಆಗಿರಬಹುದು.
ಶಾಸಕ ಜೆ.ಆರ್. ಲೋಬೋ ಅವರು ಅಧಿಕಾರಿಯಾಗಿದ್ದ ಸಮಯದಲ್ಲಿ ತಾರಾಲಯ ನಿರ್ಮಾಣದ ಮುತುವರ್ಜಿ ವಹಿಸಿದ್ದರು. ಇದಾಗಿ 2013ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಟೆಂಡರ್ ಆಗಿ 2014ರಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಆವಾಗಲೇ 24 ಕೋಟಿ ರೂ.ಗೆ ಅಂದಾಜಿಸಲಾಗಿದ್ದು, ನಾನು ಸಚಿವನಾದ ಬಳಿಕ ಅದು 36 ಕೋಟಿ ರೂ.ಗಳಿಗೆ ಏರಿಕೆಯಾಯಿತು. ಕಾಮಗಾರಿ ಆರಂಭವಾಗಿದ್ದೇ 2013ರಿಂದ. ಅಂದಾಜು ವೆಚ್ಚದ ಏರಿಕೆಯಿಂದಾಗಿ ನಾಲ್ಕೈದು ತಿಂಗಳು ಕಾಮಗಾರಿ ವಿಳಂಬವಾಯಿತು ಎಂದು ಸಚಿವ ಎಂ.ಆರ್. ಸೀತಾರಾಂ ಹೇಳಿದರು.
ಕೊಡಗುವಿನಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಇತ್ತೀಚೆಗೆ ಆರಂಭಿಸಲಾಯಿತು. ರಾಮಚಂದ್ರ ಗೌಡ ಸಚಿವರಾಗಿದ್ದ ವೇಳೆ ಬಜೆಟ್ ಘೋಷಣೆಯಾಗಿ 1 ಕೋಟಿ ರೂ. ಬಿಡುಗಡೆಯಾಗಿತ್ತು. ಆದರೆ ಒಂದು ರೂಪಾಯಿ ಬಳಕೆ ಮಾಡಿರಲಿಲ್ಲ. ಜಾಗವನ್ನೂ ಗುರುತಿಸಲಾಗಿರಲಿಲ್ಲ. ಹಾಗಾಗಿ ಘೋಷಣೆ ಮತ್ತು ಮಂಜೂರು ನೀಡುವುದರಿಂದ ಏನೂ ಆಗುವುದಿಲ್ಲ ಎಂದು ಅವರು ಹೇಳಿದರು.
ಅಂದು ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರು ಶಂಕುಸ್ಥಾಪನೆಯನ್ನು ಪಿಲಿಕುಳದಲ್ಲಿ ಮಾಡಿಲ್ಲ. ಅವರು ಬೇರೆ ಕಾರ್ಯಕ್ರಮಕ್ಕೆ ಮಂಗಳೂರಿಗೆ ಬಂದಿದ್ದ ವೇಳೆ ಒಟ್ಟಿಗೆ ಇದರ ಶಂಕುಸ್ಥಾಪನೆ ನೆರವೇರಿಸಿದ್ದರು. ಇಲ್ಲಿ ಯಾವುದೇ ನಾಮಫಲಕ ಹಾಕಿಲ್ಲ. ಅವರು ಯೋಜನೆಗೆ ಮಂಜೂರಾತಿ ನೀಡಿರುವುದರ ಬಗ್ಗೆ ನಮಗೆ ಅರಿವಿದೆ. ಅದರ ಬಳಿಕ ಏನು? ಇಲ್ಲಿ 10 ವರ್ಷಗಳಿಂದ ಸ್ಥಳೀಯ ಶಾಸಕರಾಗಿದ್ದವರು ಅಭಯಚಂದ್ರ ಜೈನ್ ಅವರು. ಅವರಿಗೂ ತಿಳಿದಿಲ್ಲ. 2004ರಿಂದ ಅಧಿಕಾರಿಯಾಗಿ ಈ ಯೋಜನೆಯ ಬೆನ್ನು ಬಿದ್ದವರೇ ಪ್ರಸಕ್ತ ಶಾಸಕರಾಗಿರುವ ಜೆ.ಆರ್. ಲೋಬೊ ಅವರು ಎಂದವರು ಹೇಳಿದರು.
ಈ ಸಂದರ್ಭ ಉಪಸ್ಥಿತರಿದ್ದ ಶಾಸಕ ಜೆ.ಆರ್. ಲೋಬೊ ಮಾತನಾಡಿ, 2008ರಲ್ಲಿ ಈ ಯೋಜನೆಯ ರೂಪು ರೇಷೆ ತಯಾರಿಸಿ ಮಂಜೂರಾತಿಗೆ ಅಂದಿನ ಸರಕಾರಕ್ಕೆ ಶಾಸಕ ಯೋಗೀಶ್ ಭಟ್ ಮೂಲಕ ಆಗ್ರಹಿಸಲಾಯಿತು. ಅವರು ಮುಖ್ಯಮಂತ್ರಿ ಜತೆ ಮಾತನಾಡಿ ಯೋಜನೆಗೆ 8 ಕೋಟಿ ರೂ. ಮಂಜೂರು ಮಾಡಿಸಿದ್ದರು. ಆ ಬಳಿಕ ಯೋಜನಾ ವೆಚ್ಚ 15 ಕೋಟಿ ರೂ.ಗಳಾದಾಗ ಅದನ್ನು ಇಲಾಖೆಯ ಮೂಲಕ ಮಂಜೂರು ಮಾಡಿಸಲಾಗಿತ್ತು. ಇದೀಗ ಮಾಜಿ ಶಾಸಕರು ಹೇಳಿರುವಂತೆ ನಾವು ಯಾವುದೇ ನಾಮಫಲಕವನ್ನು ನೋಡಿಲ್ಲ. ತೆಗೆದೂ ಇಲ್ಲ. 2014ರಲ್ಲಿ ಗುದ್ದಲಿ ಪೂಜೆ ಮಾಡಿ ಕಾಮಗಾರಿ ಆರಂಭಿಸಲಾಯಿತು ಎಂದು ಹೇಳಿದರು.
ಶಾಸಕ ಅಭಯ ಚಂದ್ರ ಜೈನ್, ಮೇಯರ್ ಕವಿತಾ ಸನಿಲ್, ಪ್ರಾದೇಶಿಕ ವಿಜ್ಞಾನ ಕೇಂದ್ರದ ಡಾ. ಹೊನ್ನೇಗೌಡ ಉಪಸ್ಥಿತರಿದ್ದರು.