ಮಂಗಳೂರು: ಕೋಸ್ಟ್‌ಗಾರ್ಡ್‌ಗೆ ಮತ್ತೊಂದು ನೌಕೆ ಹಸ್ತಾಂತರ
ಮಂಗಳೂರು, ಮಾ.1: ಭಾರತಿ ಡೀನ್ಸ್ ಆ್ಯಂಡ್ ಇನ್ಫಸ್ಟ್ರಕ್ಚರ್ ಲಿ. (ಬಿಡಿಐಎಲ್) ನಿರ್ಮಿಸಿದ ಇಂಟರ್‌ಸೆಪ್ಟರ್ ನೌಕೆ ಸಿ-162 ಗುರುವಾರ ಭಾರತೀಯ ತಟ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್)ಗೆ ಮಂಗಳೂರು ತಣ್ಣೀರುಬಾವಿಯ ಬಿಡಿಐಎಲ್ ಜೆಟ್ಟಿಯಲ್ಲಿ ಹಸ್ತಾಂತರಿಸಿತು.
ಕೋಸ್ಟ್‌ಗಾರ್ಡ್‌ನ ಡೆಪ್ಯುಟಿ ಕಮಾಂಡೆಂಟ್ ಪವನ್ ಕೋಯರ್ ಅವರಿಗೆ ಬಿಡಿಐಎಲ್ ಶಿಪ್ ಯಾರ್ಡ್ ಅಧ್ಯಕ್ಷ ಪವಿತ್ರನ್ ಅಲೋಕ್ಕನ್ ಅವರಿಗೆ ದಾಖಲೆ ಪತ್ರಗಳನ್ನು ಹಸ್ತಾಂತರಿಸುವ ಮೂಲಕ ನೌಕೆ ಹಸ್ತಾಂತರ ಮಾಡಿದರು.
ಬಿಡಿಐಎಲ್‌ನ ಸಿಇಒ ನರೇಂದ್ರ ಕುಮಾರ್, ಮಹಾಪ್ರಬಂಧಕ ಮಹೇಶ್ ಎಂ.ಎನ್., ಹಿರಿಯ ಪ್ರಬಂಧಕ ಗೋಪಾಲಕೃಷ್ಣ, ಯೋಜನಾ ನಿರ್ದೇಶಕ ಕಿಶೋರ್ ರಾಣಾ, ಕೋಸ್ಟ್ ಗಾರ್ಡ್ ಡಿಐಜಿ ಅತುಲ್ ಪರ್ಲಿಕರ್, ಸಹಾಯಕ ಕಮಾಂಡೆಂಟ್ ಅಮಿತ್ ಉನಿರಾಯ, ಡೆಪ್ಯುಟಿ ಕಮಾಂಡೆಂಟ್ ಸುಶಾಂತ್ ದೇಶ್‌ಮುಖ್ ಉಪಸ್ಥಿತರಿದ್ದರು.
ಭಾರತದ ರಕ್ಷಣಾ ಇಲಾಖೆಯು ನೌಕಾ ಸೇನೆ, ಕೋಸ್ಟ್ ಗಾರ್ಡ್‌ಗೆ ಕಣ್ಗಾವಲು ನೌಕೆ ಸಹಿತ 15 ಸ್ಪೀಡ್ ಇಂಟರ್‌ಸೆಪ್ಟರ್ ನೌಕೆ ನಿರ್ಮಿಸಿಕೊಡಲು ಬಿಡಿಐಎಲ್ ಜತೆ ಸುಮಾರು 500 ಕೋಟಿ ರೂ. ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಿತ್ತು. ಆ ಗುತ್ತಿಗೆ ಒಪ್ಪಂದದ ಪ್ರಕಾರ ಇದುವರೆಗೆ ಈಗಾಗಲೇ ಐದು ನೌಕೆ ಗಳನ್ನು ಕರಾವಳಿ ತಟ ರಕ್ಷಣಾ ಪಡೆಗೆ ಹಸ್ತಾಂತರಿಸಲಾಗಿದ್ದು, ಇದು ಆರನೇ ನೌಕೆಯಾಗಿದೆ.
ಹಸ್ತಾಂತರ ಮಾಡಿದ ನೌಕೆ 28 ಮೀ. ಉದ್ದ, 60 ಡಿಡಬ್ಲ್ಯುಟಿ ಭಾರವಿದ್ದು, ಗಂಟೆಗೆ 35 ನಾಟಿಕಲ್ ಮೈಲು ವೇಗಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದೆ. ತಲಾ 1650 ಕಿಲೋ ವ್ಯಾಟ್‌ನ ಎರಡು ಎಂಜಿನ್ ಗಳ ಸಹಿತ ಆಧುನಿಕ ತಂತ್ರಜ್ಞಾನದೊಂದಿಗೆ ರೂಪಿಸಲಾಗಿದೆ. ಸಮುದ್ರದಲ್ಲಿ ಅಪಾಯಕ್ಕೆ ಸಿಲುಕುವ ಪ್ರಯಾಣಿಕರು, ಮೀನುಗಾರರ ರಕ್ಷಣೆ ಜತೆಗೆ ಕಡಲ್ಗಳ್ಳರ ಗಸ್ತಿಗೆ ಬಳಸುವ ನೌಕೆಯಲ್ಲಿ 11 ಸಿಬ್ಬಂದಿ ಪ್ರಯಾಣಿಸಲು ಅವಕಾಶವಿದೆ.
ಜ.31ರಂದು ಸಿದ್ಧಪಡಿಸಿದ ನೌಕೆಯನ್ನು 28 ದಿನಗಳಲ್ಲಿ ಸಮುದ್ರದಲ್ಲಿ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. ಈ ಹಿಂದಿನ ನಾಲ್ಕು ನೌಕೆಗಳನ್ನು ಗೋವಾದ ಭಾರತಿ ಶಿಪ್‌ಯಾರ್ಡ್‌ನಲ್ಲಿ ನಿರ್ಮಿಸಿದ್ದರೆ, ತಣ್ಣೀರುಬಾವಿ ಶಿಪ್‌ಯಾರ್ಡ್‌ನಲ್ಲಿ ಇದು ಸಹಿತ ಎರಡು ನೌಕೆ ನಿರ್ಮಿಸಲಾಗಿದೆ. ಒಪ್ಪಂದದಂತೆ ಮುಂದಿನ ಒಂಬತ್ತು ನೌಕೆಗಳನ್ನು ಗೋವಾದಲ್ಲಿ ನಿರ್ಮಿಸಿ, ಮಂಗಳೂರಿಗೆ ತಂದು ಕೋಸ್ಟ್ ಗಾರ್ಡ್‌ಗೆ ಹಸ್ತಾಂತರ ಮಾಡಲಾಗುವುದು ಎಂದು ಶಿಪ್‌ಯಾರ್ಡ್ ಮುಖ್ಯಸ್ಥ ಪವಿತ್ರನ್ ಅಲೋಕ್ಕನ್ ಹೇಳಿದರು.