ಸುರತ್ಕಲ್‌ನ ಸ್ಥಳಾಂತರಿತ ಮಾರುಕಟ್ಟೆ ಕಟ್ಟಡ ಒಡೆದು ಬೇಕಾಬಿಟ್ಟಿ ಬಳಕೆ: ಆರೋಪ
ಮಂಗಳೂರು, ಮಾ. 1: ಸುರತ್ಕಲ್ ನ ಸ್ಥಳಾಂತರಿತ ಹೊಸ ಮಾರುಕಟ್ಟೆ ಕಟ್ಟಡವನ್ನು ಒಡೆದು ಬಲಾಢ್ಯ ಲಾಬಿಗಳು ಬೇಕಾಬಿಟ್ಟಿ ಬಳಕೆ ಮಾಡುತ್ತಿದ್ದಾರೆ ಹಾಗೂ ಸಾರ್ವಜನಿಕರ ಕೋಟ್ಯಾಂತರ ತೆರಿಗೆ ಹಣವನ್ನು ಶಾಸಕ ಮೊಯ್ದಿನ್ ಬಾವ ಪೋಲು ಮಾಡಿದ್ದಾರೆ ಎಂದು ಆರೋಪಿಸಿ ಮಾ. 2ರಂದು ಬೆಳಗ್ಗೆ 10 ಗಂಟೆಗೆ ಡಿವೈಎಫ್‌ಐ ವತಿಯಿಂದ ಸುರತ್ಕಲ್‌ನ ಹೊಸ ಮಾರುಕಟ್ಟೆ ಕಟ್ಟಡ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಸುರತ್ಕಲ್‌ನಲ್ಲಿ ಹೊಸ ಮಾರುಕಟ್ಟೆಯ ನಿರ್ಮಾಣಕ್ಕಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿದ್ದವರನ್ನು ಸ್ಥಳಾಂತರಿಸಲು ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸುರತ್ಕಲ್‌ನಲ್ಲಿ ತಾತ್ಕಾಲಿಕವಾಗಿ ಹೊಸ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಲಾಗಿದೆ. ತಾತ್ಕಾಲಿಕ ಮಾರುಕಟ್ಟೆಯಲ್ಲಿನ ಅಂಗಡಿಗಳನ್ನು ಬಲಾಢ್ಯರಿಗೆ, ಪುಂಡಾರುಗಳಿಗೆ ಹಾಗೂ ಶಾಸಕರ ಹಿಂಬಾಲಕರಿಗೆ ಹಂಚಲಾಗಿದ್ದು, ಲಾಭಿ ಮಾಡಲಾಗದ ಬಡ ವ್ಯಾಪಾರಸ್ಥರಿಗೆ ವಂಚಿಸಲಾಗಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪ ಮಾಡಿದ್ದಾರೆ.
ತಾತ್ಕಾಲಿಕ ಮಾರುಕಟ್ಟೆಯಲ್ಲಿ ಸರಣಿ ಅಂಗಡಿ ಪಡೆದಿರುವ ಬಲಾಢ್ಯರು ಶಾಸಕರ ಬೆಂಬಲದೊಂದಿಗೆ ತಮಗೆ ತೋಚಿದಂತೆ ಮಾರುಕಟ್ಟೆ ಅಂಗಡಿಗಳನ್ನು ಒಡೆದು ಹಾಕಿ ಬೇಕಾಬಿಟ್ಟಿ ನಡೆದು ಕೊಳ್ಳುತ್ತಿದ್ದಾರೆ. ಶಾಸಕ ಮೊಯ್ದಿನ್ ಬಾವ ಅವರ ನಡೆ ಖಂಡಿಸಿ, ಮಾರುಕಟ್ಟೆ ಸ್ಥಳಾಂತರ ಪ್ರಕ್ರಿಯೆಯಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಬಲಾಢ್ಯ ಲಾಭಿಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.