ರೊಹಿಂಗ್ಯಾರ ‘ಜನಾಂಗೀಯ ಹತ್ಯೆ’ ನಿಲ್ಲಿಸಿ

Update: 2018-03-01 16:25 GMT

ಢಾಕಾ (ಬಾಂಗ್ಲಾದೇಶ), ಮಾ. 1: ರೊಹಿಂಗ್ಯಾ ಮುಸ್ಲಿಮರ ‘ಜನಾಂಗೀಯ ಹತ್ಯೆ’ಯನ್ನು ತಕ್ಷಣ ನಿಲ್ಲಿಸಿ, ಇಲ್ಲವೇ ವಿಚಾರಣೆ ಎದುರಿಸಿ ಎಂಬುದಾಗಿ ಮೂವರು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರು ಬುಧವಾರ ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಮತ್ತು ಸೇನೆಯನ್ನು ಒತ್ತಾಯಿಸಿದ್ದಾರೆ.

‘‘ರೊಹಿಂಗ್ಯಾ ಮುಸ್ಲಿಮರ ವಿರುದ್ಧ ನಡೆಸಲಾಗುತ್ತಿರುವ ಹಿಂಸಾಚಾರದ ವಿಷಯದಲ್ಲಿ ಕುರುಡರಂತೆ ವರ್ತಿಸುವುದನ್ನು ಸೂ ಕಿ ನಿಲ್ಲಿಸಬೇಕು, ಇಲ್ಲವೇ ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪವನ್ನು ಎದುರಿಸಬೇಕಾಗುತ್ತದೆ’’ ಎಂದು ಯಮನ್‌ನ ಮಾನವಹಕ್ಕುಗಳ ಹೋರಾಟಗಾರ್ತಿ ತವಕ್ಕಲ್ ಕಾರ್ಮನ್ ಹೇಳಿದರು. ಅವರು 2011ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿದ್ದಾರೆ.

ಅವರು ಬಾಂಗ್ಲಾದೇಶದ ದಕ್ಷಿಣದ ತುದಿಯಲ್ಲಿರುವ ಕಾಕ್ಸ್ ಬಝಾರ್‌ನಲ್ಲಿರುವ ನಿರಾಶ್ರಿತ ಶಿಬಿರಗಳಿಗೆ ಭೇಟಿ ನೀಡಿದ ಬಳಿಕ ಢಾಕಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

1976ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ಉತ್ತರ ಐರ್‌ಲ್ಯಾಂಡ್‌ನ ಮಾನವಹಕ್ಕು ಹೋರಾಟಗಾರ್ತಿ ಮೇರೀಡ್ ಮ್ಯಾಗ್ವಯರ್ ಮತ್ತು 2003ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದಿರುವ ಇರಾನ್‌ನ ವಕೀಲೆ ಶಿರಿನ್ ಇಬಾದಿ ಈ ಸಂದರ್ಭದಲ್ಲಿ ಅವರ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News