×
Ad

ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ ಸಂಪುಟದ ಅಸ್ತು

Update: 2018-03-01 21:51 IST

ಹೊಸದಿಲ್ಲಿ,ಮಾ.1: ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಿರುವ ಪ್ರಕರಣಗಳಲ್ಲಿ ದೋಷ ನಿರ್ಣಯಕ್ಕೆ ಕಾಯದೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸುವ ಕಠಿಣವಾದ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆಗೆ ಸಂಪುಟವು ಗುರುವಾರ ಸಮ್ಮತಿ ನೀಡಿತು.

ನೀರವ್ ಮೋದಿಯಂತಹ ಆರ್ಥಿಕ ಅಪರಾಧಿಗಳು ದೇಶದಿಂದ ಪರಾರಿಯಾಗಲು ಅಥವಾ ಭಾರತಕ್ಕೆ ಮರಳದೆ ವಿಚಾರಣೆಯನ್ನು ತಪ್ಪಿಸಿಕೊಳ್ಳಲು ಹಿಂಜರಿಯುವಂತೆ ಮಾಡುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಮಸೂದೆಯನ್ನು ಒಪ್ಪಿಕೊಂಡಿದ್ದು, ಮಾ.5ರಿಂದ ಆರಂಭಗೊಳ್ಳುವ ಮುಂಗಡಪತ್ರ ಅಧಿವೇಶನದ ಉತ್ತರಾರ್ಧದಲ್ಲಿ ಮಂಡಿಸಲ್ಪಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು.

ಬೇನಾಮಿ ಆಸ್ತಿಗಳು ಸೇರಿದಂತೆ ದೇಶಭ್ರಷ್ಟರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಈ ಮಸೂದೆಯನ್ನು ತರಲಾಗಿದೆ. ಭಾರತದಿಂದ ಹೊರಗಿರುವ ಆಸ್ತಿಗಳನ್ನೂ ವಶಪಡಿಸಿಕೊಳ್ಳಲು ಮಸೂದೆಯಲ್ಲಿ ಅವಕಾಶವಿದೆ, ಆದರೆ ಇದಕ್ಕೆ ಆ ರಾಷ್ಟ್ರದ ಸಹಕಾರ ಅಗತ್ಯವಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ತಿಳಿಸಿದರು.

 ಮಸೂದೆಯಲ್ಲಿನ ನಿಯಮಗಳು ಭಾರತಕ್ಕೆ ಮರಳಲು ನಿರಾಕರಿಸುವ ಆರ್ಥಿಕ ಅಪರಾಧಿಗಳಿಗೆ, ಅನುಸೂಚಿತ ಅಪರಾಧಕ್ಕಾಗಿ ಬಂಧನ ವಾರಂಟ್ ಹೊರಡಿಸಲಾಗಿರುವ ವ್ಯಕ್ತಿಗಳಿಗೆ ಮತ್ತು 100 ಕೋ.ರೂ.ಗೂ ಅಧಿಕ ಬ್ಯಾಂಕ್ ಸಾಲಗಳ ಉದ್ದೇಶಪೂರ್ವಕ ಸುಸ್ತಿದಾರರಿಗೂ ಅನ್ವಯಿಸುತ್ತವೆ.

ದೋಷನಿರ್ಣಯವಿಲ್ಲದೆ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತು ದೇಶಭ್ರಷ್ಟರ ಆಸ್ತಿಗಳನ್ನು ಮಾರಾಟ ಮಾಡಿ ಸಾಲದ ಮರುಪಾವತಿಯನ್ನು ಮಾಡಲೂ ಸಹ ನೂತನ ಮಸೂದೆಯು ಅವಕಾಶ ನೀಡುತ್ತದೆ.

ಇಂತಹ ಆರ್ಥಿಕ ಅಪರಾಧಿಗಳ ವಿಚಾರಣೆಯನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಡೆಸಲಾಗುವುದು ಎಂದೂ ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News