ಬ್ರಹ್ಮಾವರ: ಕಾರು ಡಿಕ್ಕಿ, ರಿಕ್ಷಾ ಚಾಲಕ ಮೃತ್ಯು
ಬ್ರಹ್ಮಾವರ, ಮಾ.1: ವೇಗವಾಗಿ ಬಂದ ಕಾರೊಂದು ಅಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ರಸ್ತೆಗೆ ಬಿದ್ದು, ತಲೆಗಾದ ತೀವ್ರ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ವಾರಂಬಳ್ಳಿ ಗ್ರಾಪಂ ವ್ಯಾಪ್ತಿಯ ಉಪ್ಪಿನಕೋಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಬೈಕಾಡಿ ಗ್ರಾಮದ ಭದ್ರಗಿರಿಯ ಮೈಕಲ್ ಲೂಯಿಸ್ (52) ಎಂದು ಗುರುತಿಸಲಾಗಿದೆ. ಲೂಯಿಸ್ ಅವರು ತನ್ನ ರಿಕ್ಷಾದಲ್ಲಿ ಪತ್ನಿ ಜೆನೆವಿ ಲೂಯಿಸ್ ರನ್ನು ಕುಳ್ಳಿರಿಸಿಕೊಂಡು ಮಾಬುಕಳಕ್ಕೆ ಹೋಗಿ ವಾಪಾಸು ಬ್ರಹ್ಮಾವರ ದತ್ತ ಬರುವಾಗ ಸಂಜೆ 5ಗಂಟೆ ಸುಮಾರಿಗೆ ಉಪ್ಪಿನಕೋಟೆ ಡಿವೈಡರ್ ಕ್ರಾಸ್ ಬಳಿ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಕಾರು ಅಟೋರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿತ್ತು.
ಇದರಿಂದ ರಿಕ್ಷಾ ಬಲಬದಿಯ ಡಿವೈಡರ್ ಮೇಲೆ ಹತ್ತಿ ಮಗುಚಿ ಬಿತ್ತು. ಆಗ ಚಾಲಕ ಮೈಕಲ್ ಲೂಯಿಸ್ ಅಟೋರಿಕ್ಷಾದಿಂದ ರಸ್ತೆಗೆ ಬಿದ್ದು ತಲೆಗೆ ತೀವ್ರವಾದ ಗಾಯವಾಗಿತ್ತು. ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಆರು ಗಂಟೆ ಸುಮಾರಿಗೆ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.