ಯುರೋಪ್‌ನಾದ್ಯಂತ ಹರಡುತ್ತಿರುವ ‘ಬೀಸ್ಟ್ ಫ್ರಮ್ ದ ಈಸ್ಟ್’

Update: 2018-03-01 17:33 GMT

 ಪ್ಯಾರಿಸ್, ಮಾ. 1: ಯುರೋಪ್‌ನಾದ್ಯಂತ ಬೀಸುತ್ತಿರುವ ಭೀಕರ ಶೀತ ಮಾರುತಕ್ಕೆ ಈವರೆಗೆ ಕನಿಷ್ಠ 48 ಮಂದಿ ಬಲಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಶೀತ ಮಾರುತವು ಇನ್ನಷ್ಟು ತೀವ್ರಗೊಂಡು ಉತ್ತರದ ತುದಿಯಿಂದ ಮೆಡಿಟರೇನಿಯನ್ ದಕ್ಷಿಣದವರೆಗೆ ಬೀಸಲಿದೆ ಎಂದು ಹವಾಮಾನ ಮುನ್ನೆಚ್ಚರಿಕೆ ತಿಳಿಸಿದೆ.

ಇಡೀ ಯುರೋಪ್ ಖಂಡವು ಹಿಮಾವೃತವಾಗಿದ್ದು, ಶಾಲೆಗಳು ಮುಚ್ಚಿವೆ. ನಿರಂತರವಾಗಿ ಹಿಮಪಾತವಾಗುತ್ತಿದೆ.

ಸಹಿಸಲಸಾಧ್ಯ ಕುಳಿರ್ಗಾಳಿಯನ್ನು ಎದುರಿಸಲು ಸಾಧ್ಯವಾಗದೆ ಪೋಲ್ಯಾಂಡ್‌ನಲ್ಲಿ 18 ಮಂದಿ ಮೃತರಾಗಿದ್ದಾರೆ. ಝೆಕ್ ರಿಪಬ್ಲಿಕ್‌ನಲ್ಲಿ 6; ಲಿಥುವೇನಿಯದಲ್ಲಿ 5; ಫ್ರಾನ್ಸ್ ಮತ್ತು ಸ್ಲೊವೇಕಿಯದಲ್ಲಿ ತಲಾ 4; ಇಟಲಿ, ಸರ್ಬಿಯ, ರೊಮೇನಿಯ ಮತ್ತು ಸ್ಲೊವೇನಿಯಗಳಲ್ಲಿ ತಲಾ ಇಬ್ಬರು ಮತ್ತು ಸ್ಪೇನ್‌ನಲ್ಲಿ ಓರ್ವ ಪ್ರಾಣ ಕಳೆದುಕೊಂಡಿದ್ದಾರೆ.

ಸೈಬೀರಿಯದಿಂದ ಬೀಸುತ್ತಿರುವ ಶೀತ ಮಾರುತವನ್ನು ಬ್ರಿಟನ್‌ನಲ್ಲಿ ‘ಬೀಸ್ಟ್ ಫ್ರಮ್ ದ ಈಸ್ಟ್’ (ಪೂರ್ವದಿಂದ ಬರುತ್ತಿರುವ ದೈತ್ಯ ಪ್ರಾಣಿ), ನೆದರ್‌ಲ್ಯಾಂಡ್‌ನಲ್ಲಿ ‘ಸೈಬೀರಿಯನ್ ಬೇರ್’ (ಸೈಬೀರಿಯದ ಕರಡಿ) ಮತ್ತು ಸ್ವೀಡನ್‌ನಲ್ಲಿ ‘ಸ್ನೋ ಕ್ಯಾನನ್’ (ಮಂಜಿನ ಫಿರಂಗಿ) ಎಂದು ಕರೆಯಲಾಗುತ್ತಿದೆ.

ಸ್ಕಾಟ್‌ಲ್ಯಾಂಡ್‌ನಲ್ಲಿ ಗ್ಲಾಸ್ಗೊ ವಿಮಾನ ನಿಲ್ದಾಣ ಗುರುವಾರ ಬೆಳಗ್ಗಿನವರೆಗೆ ಮುಚ್ಚಿತ್ತು ಹಾಗೂ ಎಡಿನ್‌ಬರ್ಗ್‌ನಿಂದ ಹಾರಬೇಕಾಗಿದ್ದ ಹೆಚ್ಚಿನ ವಿಮಾನಗಳನ್ನು ರದ್ದುಪಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News