×
Ad

ಕೇಂದ್ರದ ನಿಲುವಿನಿಂದ ಮೀನುಗಾರರಿಗೆ ಸಂಕಷ್ಟ: ಸಚಿವ ಖಾದರ್‌

Update: 2018-03-01 22:44 IST

ಮಂಗಳೂರು, ಮಾ. 1: ಕೇಂದ್ರ ಸರಕಾರದ ನಿರ್ಧಾರದಿಂದಲೇ ಮೀನುಗಾರರಿಗೆ ಸಂಕಷ್ಟ ಎದುರಾಗಿದ್ದು, ಮೀನುಗಾರರಿಕೆಗೆ ಸೀಮೆ ಎಣ್ಣೆ ಪೂರೈಕೆ ವಿಚಾರದಲ್ಲಿ ಬಿಜೆಪಿ ವ್ಯರ್ಥ ಆರೋಪ ಮಾಡುತ್ತಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ಆರೋಪಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀನುಗಾರರಿಗೆ ಸೀಮೆಎಣ್ಣೆ ಸಿಗದಂತೆ ಮಾಡಿದ್ದೇ ಕೇಂದ್ರ ಸರಕಾರ. ಸಬ್ಸಿಡಿ ಸೀಮೆ ಎಣ್ಣೆಯನ್ನು ಅಡುಗೆಗೆ ಹೊರತುಪಡಿಸಿ ಬೇರಾವುದೇ ಉದ್ದೇಶಕ್ಕೆ ಬಳಸದಂತೆ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಹೀಗಾಗಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ ಎಂದರು.

ಕೇಂದ್ರ ಸರಕಾರದ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡು, ಮೀನುಗಾರರಿಗೆ ಸೀಮೆ ಎಣ್ಣೆ ಬಳಸಲು ಅವಕಾಶ ನೀಡುವಂತೆ ರಾಜ್ಯ ಸರಕಾರದಿಂದ ಕೇಂದ್ರಕ್ಕೆ ಪತ್ರ ಬರೆಯಲಾಗಿತ್ತು. ಅದಕ್ಕೆ ಉತ್ತರಿಸಿರುವ ಕೇಂದ್ರ ಸರಕಾರದ ಅಧಿಕಾರಿಗಳು, ಆದೇಶದಲ್ಲಿ ಮಾರ್ಪಾಡು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದರಿಂದ ಎದುರಾಗಿರುವ ಸಮಸ್ಯೆಯನ್ನು ನಿವಾರಿಸಲು ರಾಜ್ಯ ಸರಕಾರ ಮುಂದಾಗಿದೆ ಎಂದು ಖಾದರ್ ಹೇಳಿದರು.

ರಾಜ್ಯ ಸರಕಾರದಿಂದಲೇ ಮುಕ್ತ ಮಾರುಕಟ್ಟೆಯಲ್ಲಿ ಸೀಮೆ ಎಣ್ಣೆ ಖರೀದಿಸಿ, ಮೀನುಗಾರರಿಗೆ ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷ 53 ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ. ಈ ಪೈಕಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸೇರಿ ಒಟ್ಟು 3.5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 914, ಉತ್ತರ ಕನ್ನಡ ಜಿಲ್ಲೆಯ 990 ಉಡುಪಿ ಜಿಲ್ಲೆ 2,610 ಸೇರಿದಂತೆ ಕರಾವಳಿಯ ಮೂರು ಜಿಲ್ಲೆಗಳ 4,514 ನಾಡದೋಣಿಗಳಿಗೆ ತಲಾ 300 ಲೀಟರ್ ಸೀಮೆಎಣ್ಣೆ ಪೂರೈಕೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸಚಿವ ಖಾದರ್ ಹೇಳಿದರು.

ಎಲ್ಲ ಅನಿವಾಸಿ ಭಾರತೀಯರಿಗೆ ಹೇಳಿಲ್ಲ

ಲೋ.... ಎಂಬ ಪದವನ್ನು ಬಳಸುವ ಮೂಲಕ ಅನಿವಾಸಿ ಭಾರತೀಯರಿಗೆ ಅವಮಾನ ಮಾಡಿದ್ದೇನೆಂಬ ಆರೋಪ ಇದೆ. ಎಲ್ಲ ಅನಿವಾಸಿ ಭಾರತೀಯರಿಗೆ ನಾನು ಅವಮಾನ ಮಾಡಿಲ್ಲ ಎಂದು ಸಚಿವ ಯು.ಟಿ. ಖಾದರ್ ಸ್ಪಷ್ಟನೆ ನೀಡಿದರು.

ನಾನು ಹಿಂದೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದರಿಂದ ಕೆಲವರು ಉದ್ದೇಶಪೂರ್ವಕವಾಗಿ ಧರ್ಮದ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಇಲ್ಲಸಲ್ಲದ ಸಂದೇಶಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಅದು ಯಾರೆಂಬುದು ನನಗೆ ತಿಳಿದಿದೆ. ಲೋ.... ಎಂಬುದು ರಾಯಲ್ ಹೆಸರು ಎಂದು ಸಚಿವರು ಹೇಳಿದರು.

ಧಾರ್ಮಿಕ ಸೌಹಾರ್ದ ಕಾಪಾಡುವುದು ನನ್ನ ಕೆಲಸ. ಹಾಗಾಗಿ ಕ್ಷೇತ್ರದಲ್ಲಿ ಯಾವುದೇ ಧರ್ಮದ ಕಾರ್ಯಕ್ರಮ ಇದ್ದರೂ, ನಾನು ಭಾಗವಹಿಸುತ್ತೇನೆ. ಅದು ತಪ್ಪಾಗಿದ್ದರೆ, ತಿದ್ದಲು ಹೇಳಲು ಧರ್ಮಗುರುಗಳ ಇದ್ದಾರೆ. ಇವರಿಂದ ತಿಳಿದುಕೊಳ್ಳಬೇಕಾಗಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News