ಮಂಗಳೂರು: ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರ
ಮಂಗಳೂರು, ಮಾ. 1: ನಗರದ ವಾಯು ಮಾಲಿನ್ಯದ ಪ್ರಮಾಣ ಮತ್ತು ವಾಯು ಗುಣಮಟ್ಟದ ನಿರಂತರ ಪರಿಶೀಲನೆಗಾಗಿ ಕದ್ರಿ ಪ್ರವಾಸಿ ಬಂಗಲೆ ವಠಾರದಲ್ಲಿ ಸ್ಥಾಪಿಸಲಾಗಿರುವ ನಿರಂತರ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗುರುವಾರ ಉದ್ಘಾಟಿಸಿದರು.
ರಾಜ್ಯದಲ್ಲಿ ಬೆಂಗಳೂರಿನಲ್ಲಿ ಮಾತ್ರ ಇಂತಹ ಕೇಂದ್ರವಿ ಇತ್ತು. ಇದೀಗ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಮೊದಲ ಬಾರಿಗೆ ಮಂಗಳೂರಿನಲ್ಲಿ ಇಂತಹ ಕೇಂದ್ರವು ಕಾರ್ಯಾರಂಭವಾಗಿದೆ. ನಗರದ ವಾಯು ಗುಣಮಟ್ಟವನ್ನು ದಿನದ 24 ಗಂಟೆಯೂ ಪ್ರತಿ ನಿಮಿಷಕ್ಕೊಮ್ಮೆ ಇದು ದಾಖಲಿಸಲಿದೆ. ಈ ಮಾಹಿತಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಮಾತ್ರವಲ್ಲ, ಬೆಂಗಳೂರಿನಲ್ಲಿರುವ ಪ್ರಧಾನ ಕಚೇರಿಗೂ ಅಂತರ್ಜಾಲದ ಮೂಲಕ ರವಾನೆಯಾಗಲಿದೆ. ಗಾಳಿಯಲ್ಲಿ ಕಾರ್ಬನ್ ಡೈಆಕ್ಸೈಡ್, ಕಾರ್ಬನ್ ಮೋನಾಕ್ಸೈಡ್, ಹೈಡ್ರೋಕಾರ್ಬನ್ ಸೇರಿದಂತೆ ವಿವಿಧ ಮಾಲಿನ್ಯಕಾರಕ ಅಂಶಗಳ ಪ್ರಮಾಣವನ್ನು ಈ ಕೇಂದ್ರವು ನಿಖರವಾಗಿ ತಿಳಿಸಲಿದೆ. ಇದರ ಮಾಹಿತಿಯನ್ನು ಎಲ್‌ಇಡಿ ಪರದೆಯ ಮೂಲಕ ಸಾರ್ವಜನಿಕರಿಗೂ ಪ್ರದರ್ಶಿಸುವ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಇತರ ಜಿಲ್ಲೆಗಳಲ್ಲೂ ಸ್ಥಾಪನೆ
ಉದ್ಘಾಟನೆಯ ಬಳಿಕ ಮಾತನಾಡಿದ ಸಚಿವ ರೈ, ಬೆಂಗಳೂರಿನ ಐದು ಕಡೆಗಳಲ್ಲಿ ಪರಿವೇಷ್ಟಕ ವಾಯು ಗುಣಮಟ್ಟ ಮಾಪನ ಕೇಂದ್ರ ಸ್ಥಾಪಿಸಲಾಗಿದೆ. ಇದೀಗ ಜಿಲ್ಲಾ ಕೇಂದ್ರಗಳಲ್ಲೂ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, 1.36 ಕೋಟಿ ರೂ. ವೆಚ್ಚದಲ್ಲಿ ಈ ಕೇಂದ್ರ ನಿರ್ಮಾಣವಾಗಿದ್ದು, ಮುಂದಿನ 5 ವರ್ಷ ನಿರ್ವಹಣೆಗಾಗಿ 1 ಕೋಟಿ ರೂ. ಮೀಸಲಿಡಲಾಗಿದೆ ಎಂದರು.ಮಂಗಳೂರು ನಗರದ ವಾಯು ಮಾಲಿನ್ಯ ಮಟ್ಟದ ಪಿಎಂ ಮಾಪನ ಗರಿಷ್ಠ ಶೇ.60 ಇರಬೇಕಾದಲ್ಲಿ ಶೇ.61ರಷ್ಟಿದೆ. ಇದು ಅಪಾಯದ ಸಂಕೇತ. ಇಲ್ಲಿ ಕಟ್ಟಡ ಕಾಮಗಾರಿಗಳು, 6 ಲಕ್ಷ ವಾಹನಗಳಿಂದ ಶೇ.42ರಿಂದ 45ರಷ್ಟು ಮಾಲಿನ್ಯ ಉಂಟಾಗುತಿತಿದ್ದು, ಕಸ ಸುಡುವುದು ಮತ್ತಿತರ ಚಟುವಟಿಕೆಗಳಿಂದ ಉಳಿದ ಮಾಲಿನ್ಯ ಉಂಟಾಗುತ್ತಿರುವುದು ಕಂಡುಬಂದಿದೆ. ಈಗ ವಾಯು ಮಾಪನ ಕೇಂದ್ರ ಸ್ಥಾಪನೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಇದುವರೆಗೆ 13ರಿಂದ 15 ಸಾವಿರ ವಾಹನಗಳ ಪರಿಶೀಲನೆ ನಡೆಸಲಾಗಿದ್ದು, ಶೇ.24ರಷ್ಟು ಡೀಸೆಲ್ ಎಂಜಿನ್ ವಾಹನಗಳು ಹಾಗೂ ಶೇ.13ರಷ್ಟು ಪೆಟ್ರೋಲ್ ಎಂಜಿನ್ ವಾಹನಗಳು ನಿಗದಿತ ಮಾನದಂಡಕ್ಕಿಂತ ಕಳಪೆಯಾಗಿರುವುದು ಕಂಡುಬಂದಿದೆ. ಅಂತಹ ವಾಹನ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸಲಹೆ ನೀಡಲಾಗಿದೆ ಎಂದು ಲಕ್ಷ್ಮಣ್ ತಿಳಿಸಿದರು.
ಶಾಸಕ ಮೊಯ್ದಿನ್ ಬಾವ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯುಸ್ ರೊಡ್ರಿಗಸ್, ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಟಿ. ಕಾಂತರಾಜು, ಕಾರ್ಯ ನಿರ್ವಾಹಕ ಅಭಿಯಂತರ ಗಣೇಶ್ ಅರಳಿಕಟ್ಟಿ, ಮಂಗಳೂರಿನ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಾಜಶೇಖರ್ ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.