ಧಾರ್ಮಿಕ ಪ್ರವಚನಕಾರ ಎಂ.ಎಂ. ಅಕ್ಬರ್ ಬಂಧನ ಖಂಡಿಸಿ ಎಸ್‌ಡಿಪಿಐ ಪ್ರತಿಭಟನೆ
ಮಂಗಳೂರು, ಮಾ.1: ಧಾರ್ಮಿಕ ಪ್ರವಚನಕಾರ ಹಾಗೂ ಪೀಸ್ ಇಂಟರ್ ನ್ಯಾಷನಲ್ ರಾಷ್ಟ್ರೀಯ ನಿರ್ದೇಶಕ ಎಂ.ಎಂ. ಅಕ್ಬರ್ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಅಕ್ರಮವಾಗಿ ಬಂಧಿಸಿರುವುದನ್ನು ಖಂಡಿಸಿ ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯು ನಗರದ ಪುರಭವನದ ಬಳಿಯ ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿತು.
ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಎಲ್ಲ ಧರ್ಮ, ಪಂಗಡ, ಜಾತಿಯವರಿಗೂ ಅವರವರ ಧರ್ಮಕ್ಕೆ ಜೀವಿಸುವಂತಹ ಅವಕಾಶವಿದೆ. ಧರ್ಮ ಪ್ರಚಾರ ಮಾಡುವ ಹಕ್ಕನ್ನೂ ಕೂಡ ಸಂವಿಧಾನ ನೀಡಿದೆ. ಅದರಂತೆ ಎಂ.ಎಂ.ಅಕ್ಬರ್ ಧಾರ್ಮಿಕ ಪ್ರವಚನ ಮಾಡಿದ್ದೇ ತಪ್ಪು ಎಂಬಂತೆ ಬಿಂಬಿಸಿ ಹೈದರಾಬಾದ್ ಪೊಲೀಸರ ಮೂಲಕ ಕೇಂದ್ರ ಸರಕಾರ ಬಂಧಿಸಿ ಮುಸ್ಲಿಮರ ದಮನಕ್ಕೆ ಯತ್ನಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮುಸ್ಲಿಮರ ದಮನದ ಮುಂದುವರಿದ ಭಾಗವಾಗಿ ಝಾಕಿರ್ ನಾಯ್ಕಿ, ನಾಸರ್ ಮಅದನಿ ಅವರ ಮೇಲೂ ಕ್ರಮ ಜರಗಿಸಿದ್ದ ಪೊಲೀಸರು ಸಂವಿಧಾನಾತ್ಮಕವಾಗಿ ಕಾರ್ಯಾಚರಿಸುವ ಸಂಘಟನೆಗಳನ್ನು ನಿರ್ಭಂಧಿಸುತ್ತಿರುವುದು ಕಂಡು ಬರುತ್ತಿದೆ. ಹಾಗಾಗಿ ರಾಷ್ಟ್ರಪತಿ ಮಧ್ಯಪ್ರವೇಶಿಸಿ ಮುಸ್ಲಿಮರ ಮೇಲೆ ಸರಕಾರ ನಡೆಸುವ ದಮನ ನೀತಿಯನ್ನು ನಿಲ್ಲಿಸಲು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದ.ಕ.ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾರ್ ಬೆಳ್ಳಾರೆ, ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲ್, ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಪುತ್ತೂರು, ಯುನಿವೆಫ್ ಜಿಲ್ಲಾ ಸಂಚಾಲಕ ಅಬ್ದುಲ್ ರಹಿಮಾನ್ ಇ.ಟಿ., ಇಮಾಮ್ಸ್ ಕೌನ್ಸಿಲ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ, ಎಸ್‌ಡಿಟಿಯು ರಾಜ್ಯಾಧ್ಯಕ್ಷ ಜಲೀಲ್ ಕೃಷ್ಣಾಪುರ ಮತ್ತಿತರರು ಪಾಲ್ಗೊಂಡಿದ್ದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.