ದಲಿತ ಯುವಕನ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಗೆ ಎಸ್‌ಡಿಪಿಐ ಆಗ್ರಹ
ಮಂಗಳೂರು, ಮಾ.1: ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಾಯೇರ್ತಡ್ಕ ಮನೆಯ ಗಣೇಶ್ ಎಂಬವರ ಪುತ್ರ ಜಯಪ್ರಕಾಶ್ (19) ಎಂಬಾತ ಕಳೆದ ವರ್ಷದ ಡಿ.13ರಂದು ಕುಮಾರಧಾರ ನದಿಯಲ್ಲಿ ಮುಳುಗಿ ನಿಗೂಢವಾಗಿ ಸಾವಿಗೀಡಾಗಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿ ಆಗ್ರಹಿಸಿದೆ.
ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ದಸಂಸ ಸಂಚಾಲಕ ಹಾಗೂ ಎಸ್‌ಡಿಪಿಐ ಜಿಲ್ಲಾ ಉಪಾಧ್ಯಕ್ಷ ಆನಂದ ಮಿತ್ತಬೈಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ನಿಕಟಪೂರ್ವ ಎಸ್ಪಿಗೆ ಸೂಕ್ತ ದಾಖಲೆಯೊಂದಿಗೆ ಮನವಿ ಸಲ್ಲಿಸಿದರೂ ಪ್ರಯೋಜ ನವಾಗಲಿಲ್ಲ. ಇದೀಗ ಹಾಲಿ ಎಸ್ಪಿಗೆ ಮನವಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಭರವಸೆ ಈಡೇರಿಸದಿದ್ದರೆ ಮೊದಲ ಹಂತವಾಗಿ ಸುಬ್ರಹ್ಮಣ್ಯ ಠಾಣೆಗೆ ಮುತ್ತಿಗೆ ಹಾಕಲಾಗುವುದು. ಬಳಿಕ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಘಟನೆ ನಡೆದ ದಿನ ಠಾಣೆಯ ಎಎಸ್ಸೈ ಚನ್ನಪ್ಪ ತನ್ನನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಜಯಪ್ರಕಾಶ್ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ ಎಂದರು. ಆದರೆ, ಪೊಲೀಸರು ತೋರಿಸಿದ ಸ್ಥಳ ಅಪಾಯಕಾರಿಯಾಗಿರಲಿಲ್ಲ. ಆದರೆ ಮೃತದೇಹ ಪತ್ತೆಯಾದ ಜಾಗ ಸುಮಾರು 45 ಅಡಿ ಆಳವಿದೆ. ಪೊಲೀಸರು ತೋರಿಸಿದ ಜಾಗಕ್ಕಿಂತ 100 ಅಡಿ ಅಂತರವಿದೆ. ಜಯಪ್ರಕಾಶ್‌ನ ಸಾವಿನ ಬಗ್ಗೆ ಸಂಶಯವಿದೆ. ಕಾಣದ ಕೈಗಳ ಶಕ್ತಿ ಇದೆ ಎಂದು ಆನಂದ ಮಿತ್ತಬೈಲ್ ಆಪಾದಿಸಿದರು.
ಕುಮಾರಧಾರಾ ನದಿ ಕಿನಾರೆಗೆ ಐವರು ಸ್ನೇಹಿತರ ಜೊತೆಗೂಡಿ ಊಟಕ್ಕೆ ಹೋಗಿದ್ದು, ಮರಳಿ ಬಂದಿಲ್ಲ. ಆತನನ್ನು ಕಪ್ಪು ಬಣ್ಣದ ಕಾರಿನಲ್ಲಿ ಮೂವರು ಹಿಂಬಾಲಿಸಿಕೊಂಡಿದ್ದರು. ಅದನ್ನು ಸ್ಥಳೀಯ ಗೂಡಂಗಡಿಯವರು ಕೂಡ ಕಂಡಿದ್ದು, ಪೊಲೀಸರಿಗೂ ಮಾಹಿತಿ ನೀಡಿದ್ದರು. ಆರಂಭದಲ್ಲೇ ಕುಟುಂಬಸ್ಥರು ಪ್ರಕರಣದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು ಎಂದ ಆನಂದ ಮಿತ್ತಬೈಲ್, ಜಯಪ್ರಕಾಶ್‌ನಿಗೆ ಗೌಡ ಸಮುದಾಯದ ಯುವತಿಯ ಜೊತೆ ಪ್ರೇಮವಿತ್ತು. ಆ ಹಿನ್ನೆಲೆಯಲ್ಲಿ ಜಯಪ್ರಕಾಶ್‌ನನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ. ಘಟನೆಯ ಬಳಿಕ ಈ ಯುವತಿಯು 9 ಬಾರಿ ಜಯಪ್ರಕಾಶ್‌ನ ತಂದೆಯ ಮೊಬೈಲ್‌ಗೆ ಕರೆ ಮಾಡಿದ್ದಳು. ಆದರೆ, ಆ ಕರೆಯನ್ನು ಅವರು ಸ್ವೀಕರಿಸಿರಲಿಲ್ಲ. ಕೆಲವು ದಿನಗಳ ಬಳಿಕ ಆ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಒಟ್ಟಿನಲ್ಲಿ ಪ್ರಕರಣ ತುಂಬಾ ಜಟಿಲವಿದ್ದು, ಪೊಲೀಸ್ ಇಲಾಖೆಯು ಯಾವುದೇ ಆಮಿಷಕ್ಕೆ ಒಳಗಾಗದೆ ತನಿಖೆ ನಡೆಸಿ ನ್ಯಾಯ ಒದಗಿಸಿಕೊಡಬೇಕು ಎಂದರು.
ಅವರ್ಯಾರೂ ಬರಲಿಲ್ಲ: ಹಿಂದುತ್ವ ಹಿಂದುತ್ವ ಎನ್ನುವ ಸಂಘ ಪರಿವಾರದ ಯಾರೂ ಕೂಡ ನಮ್ಮ ನೆರವಿಗೆ ಬಂದಿಲ್ಲ. ಆರೋಪಿತರನ್ನು ರಕ್ಷಿಸಲು ರಾಜಕೀಯ ಶಕ್ತಿಗಳೊಂದಿಗೆ ಇವರು ಕೂಡ ಶಾಮೀಲಾಗಿರುವ ಸಾಧ್ಯತೆ ಇದೆ. ಈ ಬಗ್ಗೆಯೂ ಪೊಲೀಸ್ ಇಲಾಖೆ ತನಿಖೆ ನಡೆಸಿ ನ್ಯಾಯ ನೀಡಬೇಕು ಎಂದು ಜಯಪ್ರಕಾಶ್‌ನ ತಂದೆ ಗಣೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಜಯಪ್ರಕಾಶ್‌ನ ತಾಯಿ ಇಂದಿರಾ, ದಲಿತ ವಿದ್ಯಾರ್ಥಿ ಒಕ್ಕೂಟದ ಮುಖಂಡ ತಾಕೇಶ್ ಕುಂದಾರು ಉಪಸ್ಥಿತರಿದ್ದರು.