×
Ad

ತುಂಬಾ ತಡವಾಗುವ ಮುನ್ನ ನಮ್ಮನ್ನು ರಕ್ಷಿಸಿ: ಜಗತ್ತಿಗೆ ಸಿರಿಯಾ ಬಾಲಕನ ಮನವಿ

Update: 2018-03-02 17:22 IST

ಡಮಾಸ್ಕಸ್, ಮಾ.2: ಸಿರಿಯಾ ದೇಶದ ನಿವಾಸಿಯಾಗಿರುವ 15 ವರ್ಷದ ಮುಹಮ್ಮದ್ ನಜೆಮ್ ತನ್ನ ವಯಸ್ಸಿನ ಇತರ ಬಾಲಕರಂತೆಯೇ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯನಾಗಿದ್ದಾನೆ. ಆದರೆ ಇತರರಂತೆ ಸೆಲ್ಫಿಗಳನ್ನು ಪೋಸ್ಟ್ ಮಾಡದೆ ಆತ ಡಿಸೆಂಬರ್ 7ರಿಂದ ಟ್ವಿಟ್ಟರ್ ಖಾತೆಯ ಮೂಲಕ ತನ್ನ ದೇಶದ ಪೂರ್ವ ಘೌಟಾ ಪ್ರದೇಶದ ಮೇಲೆ ಅಧ್ಯಕ್ಷ ಬಶರ್ ಅಲ್-ಅಸ್ಸದ್ ಪಡೆಗಳು ನಡೆಸುತ್ತಿರುವ ದಾಳಿಯ ಭೀಕರತೆಯನ್ನು ಜಗತ್ತಿಗೆ ತೋರಿಸುತ್ತಿದ್ದಾನೆ.

2011ರಿಂದ  ನಾಗರಿಕ ಯುದ್ಧದಲ್ಲಿ ಕಂಗಾಲಾಗಿ ಹೋಗಿರುವ ದೇಶದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಕೆಲವೇ ಕೆಲವು ಪ್ರದೇಶಗಳಲ್ಲೊಂದಾದ ಪೂರ್ವ ಘೌಟಾದಲ್ಲಿನ ಪರಿಸ್ಥಿತಿಯನ್ನು ಮುಹಮ್ಮದ್ ನಜೆಮ್ ತನ್ನ ಟ್ವಿಟ್ಟರ್ ಖಾತೆಯ ಮೂಲಕ ವಿವರಿಸುತ್ತಿದ್ದಾನೆ. ಅಲ್ಲಿನ ಸಂಕಷ್ಟಗಳನ್ನು ವಿವರಿಸುವ ಫೋಟೋಗಳಲ್ಲದೆ ವೀಡಿಯೋಗಳನ್ನೂ ಆತ ಪೋಸ್ಟ್ ಮಾಡಿದ್ದಾನೆ.

ಸಿರಿಯಾದ ಅಧ್ಯಕ್ಷ ಬಶರ್ ಅಲ್-ಅಸ್ಸದ್ ಹಾಗೂ ವಿವಿಧ ಬಂಡುಕೋರ ಗುಂಪುಗಳ ನಡುವಿನ ಸಂಘರ್ಷ ಈಗಾಗಲೇ ದೇಶದ 4.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆಯಲ್ಲದೆ ಲಕ್ಷಾಂತರ ಜನರನ್ನು ಬೀದಿಗೆ ತಳ್ಳಿದೆ. ಕಳೆದ ಹಲವಾರು ವರ್ಷಗಳಲ್ಲಿ ಅಧ್ಯಕ್ಷರ ನೇತೃತ್ವದ ಪಡೆ ಹಲವಾರು ಪ್ರದೇಶಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದ್ದರೂ ಪೂರ್ವ ಘೌಟಾದಲ್ಲಿ ಇನ್ನೂ ಯುದ್ಧ ಪರಿಸ್ಥಿತಿ ಮುಂದುವರಿದಿದೆ. ಫೆಬ್ರವರಿಯಲ್ಲಿ ಇಲ್ಲಿನ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಅಧ್ಯಕ್ಷರ ಪಡೆ, ರಷ್ಯಾ ಸಹಾಯದೊಂದಿಗೆ ಇಲ್ಲಿ ನಡೆಸಿದ ವಾಯುದಾಳಿಯಲ್ಲಿ ಈಗಾಗಲೇ  500 ಮಂದಿ ಬಲಿಯಾಗಿದ್ದು ಜನರು ಭೂಗತ  ಆಶ್ರಯತಾಣಗಳಲ್ಲಿ ತಂಗುವಂತೆ  ಮಾಡಿ ಅವರೆಲ್ಲರೂ  ಆಹಾರ ಮತ್ತು ನೀರಿಗಾಗಿ ಹಪಹಪಿಸುವಂತೆ ಮಾಡಿದೆ.

ಅಂತಾರಾಷ್ಟ್ರೀಯ ಸಮುದಾಯ ಇಲ್ಲಿನ ಪರಿಸ್ಥಿತಿಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಜೆಮ್ ಆಶಯ. ತಾನು ಮತ್ತು ತನ್ನ ಕುಟುಂಬ ಭೂಗತ ಆಶ್ರಯತಾಣದಲ್ಲಿರುವುದಾಗಿಯೂ ಅಲ್ಲಿ ತಮಗೆ ಸಾಕಷ್ಟು ಆಹಾರ, ನೀರು ಯಾ ವಿದ್ಯುತ್ ಇಲ್ಲವೆಂದೂ ಆತ ತಿಳಿಸಿದ್ದಾನೆ.

ಪೂರ್ವ ಘೌಟಾದಲ್ಲಿನ ನಾಶಗೀಡಾದ ಶಾಲಾ ಕಟ್ಟಡಗಳು, ಮಕ್ಕಳ ದಯನೀಯ ಪರಿಸ್ಥಿತಿಯನ್ನು ವಿವರಿಸಿ ಯುದ್ಧ ಬೇಗನೇ ನಿಂತು ತಾನು ಮತ್ತೆ ಶಾಲೆಗೆ ಹೋಗುವಂತಾಗಬೇಕೆಂದು ಆತ ಆಶಿಸುತ್ತಾನೆ.

ಸಿರಿಯಾದ ದೈನಂದಿನ ಪರಿಸ್ಥಿತಿಯ ಬಗ್ಗೆ ಹಲವು ಟ್ವೀಟ್ ಗಳನ್ನು ಮಾಡಿರುವ ಮುಹಮ್ಮದ್ ನಜೆಮ್ ಒಂದು ಟ್ವೀಟ್ ನಲ್ಲಿ "ನಮ್ಮ ರಕ್ತಸಿಕ್ತ ಚಿತ್ರಗಳಿಂದ ನೀವು ಬೇಸರಗೊಂಡಿದ್ದೀರಿ ಎನ್ನುವುದು ನಮಗೆ ತಿಳಿದಿದೆ. ತುಂಬಾ ತಡವಾಗುವ ಮುನ್ನ ನಮ್ಮನ್ನು ರಕ್ಷಿಸಿ" ಎಂದು ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News