×
Ad

ಕಟಪಾಡಿಯಲ್ಲಿ ಕೊಲೆ ಪ್ರಕರಣ: ಮೃತರ ಗುರುತು ಪತ್ತೆ; ಮೂವರು ವಲಸೆ ಕಾರ್ಮಿಕರಿಂದ ಕೃತ್ಯ

Update: 2018-03-02 18:14 IST

ಉಡುಪಿ, ಮಾ.2: ಕಟಪಾಡಿ ಸಮೀಪ ಅಚ್ಚಡ ಕ್ರಾಸ್‌ನ ವಿದ್ಯಾನಗರ ಎಂಬಲ್ಲಿ ಫೆ.10ರಂದು ರಾತ್ರಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದ್ದು, ಧಾರವಾಡ ಜಿಲ್ಲೆಯ ಕಲಘಟಗಿಯ ಮಡಕಿ ಹೊನ್ನಾಳಿಯ ಕೂಲಿ ಕಾರ್ಮಿಕ ವೀರಪ್ಪ (38) ಎಂದು ಗುರುತಿಸಲಾಗಿದೆ.

ದುಡ್ಡಿನ ವಿಚಾರದಲ್ಲಿ ವೀರಪ್ಪ ಹಾಗೂ ಅವರೊಂದಿಗೆ ಕೆಲಸ ಮಾಡುವ ಇತರ ಮೂವರು ವಲಸೆ ಕಾರ್ಮಿಕರ ಮಧ್ಯೆ ನಡೆದ ಜಗಳವೇ ಈ ಕೊಲೆಗೆ ಕಾರಣ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರ್ಗಿ ತಿಳಿಸಿದ್ದಾರೆ.

ಇವರು ನಾಲ್ವರು ಕಟಪಾಡಿಯ ವೈನ್ ಶಾಪ್‌ನಲ್ಲಿ ಕುಡಿದು ತಮ್ಮ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ದಾರಿ ಮಧ್ಯೆ ಅಚ್ಚಡ ಕ್ರಾಸ್ ಬಳಿ ಇವರ ಮಧ್ಯೆ ದುಡ್ಡಿನ ವಿಚಾರಕ್ಕೆ ಜಗಳ ನಡೆಯಿತು. ಇದರಿಂದ ಸಿಟ್ಟು ಗೊಂಡ ಮೂವರು ಅಲ್ಲೇ ಖಾಲಿ ಜಾಗದಲ್ಲಿ ವೀರಪ್ಪನನ್ನು ಹಾರೆಯಿಂದ ಬಡಿದು ಕೊಲೆ ಮಾಡಿ ಪರಾರಿಯಾಗಿದ್ದರು.

ಆರಂಭದಲ್ಲಿ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಈ ಕುರಿತು ತನಿಖೆ ನಡೆಸಿದ ಪೊಲೀಸ್ ತಂಡ ಕೊಲೆಗೀಡಾದ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ್ ನಿಂಬರ್ಗಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News