ಮೂಡುಬಿದಿರೆ: ಚಿನ್ನಾಭರಣ, ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿ ಸೆರೆ
ಮೂಡುಬಿದಿರೆ, ಮಾ.2 : ಚಿನ್ನಾಭರಣ ಮತ್ತು ಹಲವು ದ್ವಿಚಕ್ರ ವಾಹನ ಕಳವು ಪ್ರಕರಣದ ಆರೋಪಿ ಕಾರ್ಕಳ ತಾಲ್ಲೂಕಿನ ಇನ್ನಾದ ನಿವಾಸಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪ್ರದೀಪ್ (30) ಎಂದು ಗುರುತಿಸಲಾಗಿದೆ. ಶುಕ್ರವಾರ ಇಲ್ಲಿನ ಅಪರಾಧ ವಿಭಾಗದ ಎಸ್.ಐ ಶಂಕರ್ ನಾಯರಿ, ಸಿಬ್ಬಂದಿ ರಾಜೇಶ್ ಮತ್ತು ಮಾಧವ ಸ್ವರಾಜ್ಯ ಮೈದಾನ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ಪೊಲೀಸರಿಗೆ ಅಸಮರ್ಪಕ ಉತ್ತರ ನೀಡಿದನೆನ್ನಲಾಗಿದೆ. ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಮಂಗಳೂರು ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನದಲ್ಲಿ ಪಡುಬಿದ್ರೆಯಿಂದ ಮೂಡುಬಿದಿರೆಗೆ ಹೋಗುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯಿಂದ ವಾಹನ ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದು, 15 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿ ಪ್ರದೀಪ್ ಮೂಡುಬಿದಿರೆ, ವೇಣೂರು, ಕಾಪು, ಶಿರ್ವ, ಉಡುಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಮಾರು ಹತ್ತು ಬೈಕ್ ಕಳ್ಳತನ ಹಾಗೂ ಗ್ರಾಹಕರ ಸೋಗಿನಲ್ಲಿ ಅಂಗಡಿಯಿಂದ ಬಂಗಾರ ಕಳ್ಳತನದ ಆರೋಪದಲ್ಲಿ ಬಂಧನಕ್ಕೊಳಗಾಗಿ ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.