ಮಂಗಳೂರು: ಪ್ರಯಾಣಿಕರಿಗೆ ಟಿಕೆಟ್ ನೀಡದಿದ್ದರೆ ಬಸ್ ಮುಟ್ಟುಗೋಲು
ಮಂಗಳೂರು, ಮಾ.2: ನಗರದಲ್ಲಿ ಕೆಲವು ಬಸ್‌ಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್ ನೀಡದ ಕಾರಣ ತುಂಬಾ ಮಂದಿ ತೊಂದರೆ ಅನುಭವಿಸುತ್ತಿದ್ದಾರೆ. ಪ್ರಯಾಣಿಕರಿಗೆ ಟಿಕೆಟ್ ನೀಡದಿರುವ ಬಸ್ಸುಗಳನ್ನು ಮುಟ್ಟುಗೋಲು ಹಾಕಿಕೊಂಡು ಪರ್ಮಿಟ್ ಅಮಾನತುಗೊಳಿಸುವುದಾಗಿ ನಗರ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ಎಚ್ಚರಿಕೆ ನೀಡಿದ್ದಾರೆ.
ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್-ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬಂದ ದೂರುಗಳನ್ನು ಸ್ವೀಕರಿಸಿ ಅವರು ಈ ಭರವಸೆ ನೀಡಿದರು.
ಪಡೀಲ್‌ನ ವ್ಯಕ್ತಿಯೊಬ್ಬರು ಕರೆ ಮಾಡಿ ನರ್ಮ್ ಬಸ್‌ಗಳಲ್ಲಿ ಮಾತ್ರ ಕ್ರಮ ಬದ್ಧವಾಗಿ ಟಿಕೆಟ್ ನೀಡುತ್ತಾರೆ. ಉಳಿದಂತೆ ಯಾವುದೇ ಖಾಸಗಿ ಬಸ್ಸುಗಳಲ್ಲಿ ಟಿಕೆಟ್ ನೀಡುತ್ತಿಲ್ಲ. ಇದರಿಂದ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದರು.
ಬಸ್ ಟಿಕೆಟ್ ನೀಡದಿರುವ ಬಗ್ಗೆ ಹಲವಾರು ಸಮಯದಿಂದ ಕಾರ್ಯಕ್ರಮಗಳಲ್ಲಿ ದೂರುಗಳು ಬರುತ್ತಿದೆ. ಈ ಬಗ್ಗೆ ಬಸ್ ಮಾಲಕರಿಗೆ ಹಲವು ಬಾರಿ ತಿಳಿಸಿದ್ದರೂ ಪ್ರಯೋಜನವಾಗಿಲ್ಲ. ಬಸ್ ಸಿಬ್ಬಂದಿಗೆ ಎರಡು ದಿನಗಳ ತರಬೇತಿಯನ್ನು ಏರ್ಪಡಿಸಿ, ಈ ಕುರಿತಂತೆ ತಿಳುವಳಿಕೆ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಆದ್ದರಿಂದ ಇನ್ನು ಮುಂದೆ ವಿಶೇಷ ಕಾರ್ಯಾಚರಣೆ ನಡೆಸಿ ಟಿಕೆಟ್ ನೀಡದಿರುವ ಬಸ್‌ಗಳನ್ನು ಪತ್ತೆ ಹಚ್ಚಿ ಅವುಗಳ ಪರ್ಮಿಟ್ ಅಮಾನತಿನಂತಹ ಕಠಿಣ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಎಚ್ಚರಿಸಿದ್ದಾರೆ.
ಕೊಡಿಯಾಲ್ ಬೈಲ್‌ನಲ್ಲಿ ಜೈಲು ಪರಿಸರದಲ್ಲಿ ಜಾಮರ್ ಅಳವಡಿಸಿರುವುದರಿಂದ ಮೊಬೈಲ್ ಸಂಪರ್ಕ ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ದೂರು ಸಲ್ಲಿಸಿದರು.
ಮೂಡುಬಿದಿರೆಯಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೊಡಕಾಡುತ್ತಿದೆ ಎಂದು ಹಲವು ದೂರುಗಳು ಬಂದವು. ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ಮೂಡುಬಿದಿರೆಯಲ್ಲಿ ಟ್ರಾಫಿಕ್ ಪೊಲೀಸರಿಲ್ಲ. ಅಲ್ಲಿನ ಠಾಣೆಯ ಪೊಲೀಸರನ್ನು ಟ್ರಾಫಿಕ್ ನಿರ್ವಹಣೆಗೆ ನಿಯೋಜಿಸಲಾಗುವುದು ಎಂದರು.
ಕಾನೂನು ಸುವ್ಯವಸ್ಥಾ ವಿಭಾಗದ ಡಿಸಿಪಿ ಹನುಮಂತರಾಯ, ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ , ವೆಲೆಂಟೈನ್ ಡಿಸೋಜ, ಟ್ರಾಫಿಕ್ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ್, ಹೆಡ್‌ಕಾನ್ಸ್‌ಟೆಬಲ್ ಪುರುಷೋತ್ತಮ ಉಪಸ್ಥಿತರಿದ್ದರು.