×
Ad

ಮಾ.4ರಂದು ಉಡುಪಿಯಲ್ಲಿ ಏಕತಾ ಸಮಾವೇಶ: ಭರದ ಸಿದ್ಧತೆ

Update: 2018-03-02 22:25 IST

ಉಡುಪಿ, ಮಾ.2: ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ ಎಂಬ ಧ್ಯೇಯವಾಕ್ಯದಡಿ ಯಲ್ಲಿ ಮಾ.4ರಂದು ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾದ ಏಕತಾ ಸಮಾವೇಶಕ್ಕೆ ಪೂರ್ವಸಿದ್ಧತೆ ಯಾಗಿ ಉಡುಪಿ, ಕಾರ್ಕಳ ಹಾಗೂ ಕುಂದಾಪುರ ತಾಲೂಕುಗಳಲ್ಲಿ ಮಸೀದಿಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖತೀಬರ ಸಭೆ ನಡೆಯಿತು.

ಉಡುಪಿ ಜಾಮೀಯ ಮಸೀದಿ, ಕುಂದಾಪುರ ಅಂಜುಮಾನ್ ಶಾಲೆ, ಕಾರ್ಕಳ ವೆಲ್ಫೇರ್ ಅಸೋಸಿಯೇಶನ್‌ನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಸೀದಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖತೀಬರಿಗೆ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿ ಹೇಳಲಾಯಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸುವಂತೆ ಕರೆ ನೀಡಲಾಯಿತು. ಈ ಸಭೆಗಳಲ್ಲಿ ಏಕತಾ ಸಮಾವೇಶದ ಸಂಚಾಲಕ ಖತೀಬ್ ಅಬ್ದುಲ್ ರಶೀದ್, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ಭಾಗವಹಿಸಿದ್ದರು.

ಉಡುಪಿ ಜಿಲ್ಲೆಯ ಬಹುತೇಕ ಮಸೀದಿಗಳಲ್ಲಿ  ಶುಕ್ರವಾರದ ಜುಮಾ ನಮಾಝ್‌ನ ಬಳಿಕ ಏಕತಾ ಸಮಾವೇಶದ ಕುರಿತ ಸುಮಾರು 40,000 ಕರಪತ್ರಗಳನ್ನು ಹಂಚಲಾಯಿತು.

10,000 ಆಸನ ವ್ಯವಸ್ಥೆ: ಸಮಾವೇಶ ನಡೆಯುವ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂಟಪದಲ್ಲಿ 10 ಸಾವಿರ ಮಂದಿ ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಸಭಾಂಗಣದ ಬಲಭಾಗದಲ್ಲಿ ಮಹಿಳೆಯರಿಗೆ ಹಾಗೂ ಎಡಭಾಗದಲ್ಲಿ ಪುರುಷರಿಗೆ ವಝು ಹಾಗೂ ನಮಾಝ್ ಮಾಡಲು  ವ್ಯವಸ್ಥೆ ಮಾಡಲಾಗಿದೆ.

ಏಕ ಕಾಲದಲ್ಲಿ 200 ಮಂದಿ ವಝು ಹಾಗೂ 2000 ಮಂದಿ ನಮಾಝ್ ಮಾಡುವ ವ್ಯವಸ್ಥೆ ಇಲ್ಲಿ ಇರುತ್ತದೆ. ಅದೇ ರೀತಿ ಮಂಟಪದ ಒಳಗೆ ಶೌಚಾಲಯ ಹಾಗೂ 10 ತಾತ್ಕಾಲಿಕ ಶೌಚಾಲಯಗಳ ಸೌಲಭ್ಯವನ್ನು ಒದಗಿಸಲಾಗುತ್ತದೆ. 20 ಸಾವಿರ ಕುಡಿಯುವ ನೀರಿನ ಬಾಟಲ್‌ಗಳು, ಸಂಜೆ ಲಘು ಉಪಹಾರ ಮತ್ತು ರಾತ್ರಿ ಭೋಜನದ ವ್ಯವಸ್ಥೆ ಕೂಡ ಇರುತ್ತದೆ. ಸಮಾವೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪತ್ರಿಕೆಗೆ ತಿಳಿಸಿದ್ದಾರೆ.

ಪಾರ್ಕಿಂಗ್- ಸಂಚಾರ ವ್ಯವಸ್ಥೆ: ಸಮಾವೇಶಕ್ಕೆ ಆಗಮಿಸುವವರು ರಾ.ಹೆ. 66ರಿಂದ ಕರಾವಳಿ ಬೈಪಾಸ್ ಮೂಲಕ ಉಡುಪಿ- ಮಣಿಪಾಲ ಹೆದ್ದಾರಿಯಲ್ಲಿ ಕುಂಜಿಬೆಟ್ಟುವಿನ ಶಾರದಾ ಕಲ್ಯಾಣ ಮಂಟಪಕ್ಕೆ ತಲುಪಬೇಕು. ಅಲ್ಲಿಂದ ಬಲ ಭಾಗದ ರಸ್ತೆಯಲ್ಲಿ ಬೀಡಿನಗುಡ್ಡೆಯಲ್ಲಿರುವ ಸಮಾವೇಶ ನಡೆಯುವ ಸಭಾಂಗಣಕ್ಕೆ ಆಗಮಿಸಬೇಕು.

ತಾಲೂಕು ಕಚೇರಿ- ಮಿಶನ್ ಕಂಪೌಂಡ್ ರಸ್ತೆಯನ್ನು ಏಕಮುಖ ಸಂಚಾರ ಮಾಡಿರುವುದರಿಂದ ಈ ರಸ್ತೆಯಲ್ಲಿ ಸಮಾವೇಶಕ್ಕೆ ಬರುವುದನ್ನು ನಿಷೇಧಿಸ ಲಾಗಿದೆ. ಸಭಾಂಗಣದ ಬಳಿ ದ್ವಿಚಕ್ರ ವಾಹನ, ಅಲ್ಲೇ ಸಮೀಪದ ಬೀಡಿನ ಗುಡ್ಡೆ ಮೈದಾನದಲ್ಲಿ ಕಾರುಗಳಿಗೆ ಮತ್ತು ಬಸ್‌ಗಳಿಗೆ ಮಿಷನ್ ಕಂಪೌಂಡ್ ಬಳಿಯ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಮಾಡಿದವರನ್ನು ಮಿಶನ್ ಕಂಪೌಂಡ್‌ನಿಂದ ಸಮಾವೇಶಕ್ಕೆ ಕರೆದುಕೊಂಡು ಬರಲು ಬೇರೆ ವಾಹನದ ಸೌಲಭ್ಯವನ್ನು ಕಲ್ಪಿಸಲಾಗಿದೆ.

300 ಸ್ವಯಂ ಸೇವಕರು: ಇಡೀ ಸಮಾವೇಶ ಅಚ್ಚುಕಟ್ಟಾಗಿ ನಡೆಯುವಂತೆ ಮಾಡಲು ಒಟ್ಟು 300 ಮಂದಿ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದ್ದು, ಅವರ ಮೇಲ್ವಿಚಾರಕರಾಗಿ 75 ಮಂದಿಯನ್ನು ನಿಯೋಜಿಸಲಾಗಿದೆ.

ಪಾರ್ಕಿಂಗ್ ಉಸ್ತುವಾರಿಯಾಗಿ ಸಾಧಿಕ್ ಅಬು ಹಾಜಿ, ಸಮಾವೇಶದ ಉಸ್ತುವಾರಿಯಾಗಿ ಹುಸೈನ್ ಕೋಡಿಬೆಂಗ್ರೆ, ನಮಾಝ್ ಸಭಾಂಗಣದ ಉಸ್ತುವಾರಿ ಯಾಗಿ ಫಾರೂಕ್ ಪಡುಬಿದ್ರೆ, ವೇದಿಕೆ ಉಸ್ತುವಾರಿಯಾಗಿ ಅಝೀಝ್ ಉದ್ಯಾವರ, ಅತಿಥಿ ಸತ್ಕಾರದ ಉಸ್ತುವಾರಿಯಾಗಿ ಶಹಬಾನು ಹಂಗಳೂರು, ರಫೀಕ್ ಗಂಗೊಳ್ಳಿ, ಮುನಾಫ್ ಕಂಡ್ಲೂರು, ಭೋಜನದ ಉಸ್ತುವಾರಿಯಾಗಿ ಮುಹಮ್ಮದ್ ಮರಕಡ, ಸ್ವಯಂಸೇವಕರ ಉಸ್ತುವಾರಿಯಾಗಿ ಸಲಾವುದ್ದೀನ್, ಧ್ವನಿ ಮತ್ತು ಬೆಳಕಿನ ಉಸ್ತುವಾರಿಯಾಗಿ ಅನ್ವರ್ ಅಲಿ ಕಾಪು ಅವರನ್ನು ನೇಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯ ಮುಸ್ಲಿಮ್ ಸಮುದಾಯದ ಧ್ವನಿಯಾಗಿರುವ ಜಿಲ್ಲಾ ಮುಸ್ಲಿಂ ಒಕ್ಕೂಟವು ಮಾ. 4ರಂದು ಉಡುಪಿಯಲ್ಲಿ ಹಮ್ಮಿಕೊಂಡಿರುವ ಏಕತಾ ಸಮಾವೇಶದಲ್ಲಿ ಸಮುದಾಯದ ಹಿತದೃಷ್ಠಿಯಿಂದ ಮುಸ್ಲಿಮರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸುನ್ನೀ ಮುಖಂಡ ಎಂ.ಪಿ. ಮೊಯ್ದಿನಬ್ಬ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News