×
Ad

ಮತ್ಸ್ಯ ಸಂಪತ್ತಿನ ಸಂರಕ್ಷಣೆಗೆ ಕಾನೂನು ಪಾಲಿಸಿ: ಪ್ರಮೋದ್

Update: 2018-03-02 22:30 IST

ಉಡುಪಿ, ಮಾ.2: ಮಾನವ ಭೇಟೆಯನ್ನು ಕಲಿತಾಗ ಪ್ರಾರಂಭಗೊಂಡ ಮೀನುಗಾರಿಕಾ ವೃತ್ತಿ ಭವಿಷ್ಯದಲ್ಲೂ ನಿರಂತರವಾಗಿ ಮುಂದುವರಿಯಬೇಕಿದ್ದರೆ, ವಿಜ್ಞಾನಿಗಳು ಹೇಳುವುದನ್ನು ಕೇಳುವುದರ ಜೊತೆ ಜೊತೆಗೆ ನಮ್ಮ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರಿಯ ಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಮೀನುಗಾರಿಕೆ ಇಲಾಖೆ ಹಾಗೂ ಕೊಚ್ಚಿಯ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ (ಸಿಎಂಎಫ್‌ಆರ್‌ಐ) ಮಂಗಳೂರು ಶಾಖೆಯ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಉಡುಪಿ ತಾಪಂ ಸಭಾಂಗಣದಲ್ಲಿ ನಡೆದ ನೀಲಿಕ್ರಾಂತಿ ಯೋಜನೆಯಡಿ ಸಮುದ್ರ ಮೀನುಗಾರಿಕೆ ಕುರಿತ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆಧುನೀಕರಣ, ಯಾಂತ್ರೀಕರಣ ಹಾಗೂ ವಾಣಿಜ್ಯ ಮನೋಭಾವ ದೊಂದಿಗೆ ಮನುಷ್ಯನಲ್ಲಿ ಸ್ವಾರ್ಥ ಹಾಗೂ ದುರಾಶೆ ಹೆಚ್ಚಿರುವುದರಿಂದ ಮೀನುಗಾರಿ ಕೆಯೂ ಇಂದು ದುರಂತದ ಅಂಚಿಗೆ ತಲುಪುತ್ತಿದೆ. ಇದು ವಿಜ್ಞಾನಿಗಳಿಗಿಂತ ಹೆಚ್ಚಾಗಿ ನಮ್ಮ ಸಾಂಪ್ರದಾಯಿಕ ಮೀನುಗಾರರಿಗೆ ಚೆನ್ನಾಗಿ ಗೊತ್ತಿದೆ. ಗೊತ್ತಿದ್ದೂ, ಗೊತ್ತಿಲ್ಲದಂತೆ ಇರುವ ಇವರು ಈಗಲೇ ಎಚ್ಚೆತ್ತು, ಮುನ್ನೆಚ್ಚರಿಕೆ ವಹಿಸದಿದ್ದರೆ, ಮುಂದಿನ ಪೀಳಿಗೆಗೆ ನಾವು ವಂಚಿಸಿದಂತಾಗುತ್ತದೆ ಎಂದರು.

ಮೀನುಗಾರರು ಮತ್ಸ್ಯ ಸಂಪತ್ತಿನ ಸಂರಕ್ಷಣೆಗೆ ಕಾನೂನನ್ನು ಪಾಲಿಸಬೇಕಿದೆ. ಮತ್ಸ ಕ್ಷಾಮದ ಬಗ್ಗೆ ಮೀನುಗಾರರಿಗೆ ಅರಿವಿದ್ದರೂ, ಪರಿಸ್ಥಿತಿಯನ್ನು ಸುಧಾರಿಸುವ ಮನಸ್ಥಿತಿ ಅವರ ವರ್ತನೆಯಲ್ಲಿ ಕಂಡುಬರುತ್ತಿಲ್ಲ ಎಂದವರು ವಿಷಾಧಿಸಿದರು.ಈ ಹಿನ್ನೆಲೆಯಲ್ಲಿ ನಿಷೇಧಿತ ಮೀನುಗಾರಿಕೆ, ಬೆಳಕು ಮೀನುಗಾರಿಕೆ ಮತ್ತು ಬುಲ್ ಟ್ರಾಲಿಂಗ್, ಅವೈಜ್ಞಾನಿಕ ಮೀನುಗಾರಿಕೆ ಹಾಗೂ ನೀತಿ-ನಿಯಮದ ಬಗ್ಗೆ ಅರಿವು ಮೂಡಿಸುವುದುನೀಲಿಕ್ರಾಂತಿ ಕಾರ್ಯಾಗಾರದ ಪ್ರಮುಖ ಉದ್ದೇಶವಾಗಿದೆ ಎಂದವರು ಹೇಳಿದರು.

ಮೀನುಗಾರ ಮಹಿಳೆಯರು ಪಡೆದ ಸಾಲದ ಮೇಲಿನ ಬಡ್ಡಿ ಸಹಾಯಧನ ಒಟ್ಟು 14.72ಕೋಟಿ ರೂ.ವನ್ನು ಸರಕಾರ ಬಿಡುಗಡೆ ಮಾಡಿದ್ದು, ಉಡುಪಿ ತಾಲೂಕಿನಲ್ಲಿ ಸಂಪೂರ್ಣ ಪಾವತಿಯಾಗಿದೆ. ಜನವರಿ ತಿಂಗಳ ಡೀಸೆಲ್ ಸಹಾಯಧನ ಪಾವತಿ ಬಿಲ್ಲು ಸಿದ್ಧವಾಗಿದ್ದು, ಖಾತೆಗೆ ಶೀಘ್ರ ಜಮೆಯಾಗಲಿದೆ. ಬಜೆಟ್ ಘೋಷಣೆಯಂತೆ ಎ.1ರಿಂದ ಮಹಿಳೆಯರಿಗೆ ಶೂನ್ಯ ಬಡ್ಡಿ ಸಾಲ ದೊರೆಯಲಿದೆ. ಜಿಲ್ಲೆಯ ಎಲ್ಲಾ ಮೀನುಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೇಜ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದು ಇದರಿಂದ ಮೀನುಮಾರಾಟ ಮಹಿಳೆ ಯರಿಗೆ ಅನುಕೂಲವಾಗಲಿದೆ ಎಂದರು.

ಸಮಾರಂಭದಲ್ಲಿ ಸಚಿವರು ಮಹಿಳೆಯರಿಗೆ ಶೀತಲೀಕರಣ ಪೆಟ್ಟಿಗೆ ಹಾಗೂ ಮೀನುಗಾರರಿಗೆ ಮೀನುಗಾರಿಕಾ ಸಲಕರಣೆಗಳ ಕಿಟ್‌ಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಮಂಗಳೂರು ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಪ್ರತಿಭಾ ರೋಹಿತ್ ಉಪಸ್ಥಿತರಿದ್ದರು. ಉಡುಪಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಾರ್ಶ್ವನಾಥ್ ಪಿ. ಸ್ವಾಗತಿಸಿ, ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಿರಣ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News