×
Ad

ಅಡಿಕೆ ಬೆಳೆಗಾರರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ-ಐವನ್ ಡಿ’ಸೋಜ

Update: 2018-03-02 22:58 IST

ಮೂಡುಬಿದಿರೆ, ಮಾ.2 : ಅಡಿಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯೆಂಬ ನೆಪವೊಡ್ಡಿ ಅಡಿಕೆ ಉತ್ಪನ್ನಗಳ ತಯಾರಿ ಮತ್ತು ಮಾರಾಟವನ್ನು ನಿಷೇಧಿಸಲು ಮುಂದಾಗಿರುವುದಾದರೆ ಇಂಡೋನೇಶ್ಯಾ, ಶ್ರೀಲಂಕಾ ಸಹಿತ ಇತರ ರಾಷ್ಟ್ರಗಳಿಂದ ಭಾರತಕ್ಕೆ ಅಡಿಕೆಯನ್ನು ಆಮದು ಮಾಡಿಕೊಳ್ಳುತ್ತಿರುವುದು ಯಾರ ಲಾಭಿಗಾಗಿ...? ಕೇಂದ್ರ ಸರ್ಕಾರವು ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶವಿದೆ ಎಂದು ಹೇಳುವ ಮೂಲಕ ಅಡಕೆ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸುವತ್ತ ಸಾಗುತ್ತಿದೆ, ಅವೈಜ್ಞಾನಿಕವಾಗಿ ಅಡಿಕೆ ನಿಷೇಧಿಸಿದರೆ ಅಡಿಕೆ ಬೆಳೆಗಾರರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಐವನ್ ಡಿ’ಸೋಜ ಆರೋಪಿದರು.

ಅವರು ತಹಶೀಲ್ದಾರ್ ಕಛೇರಿ ಆವರಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು. ಅಡಿಕೆಯನ್ನು ಬೆಳೆಸುವುದು ಕೇವಲ ವಾಣಿಜ್ಯ ಉದ್ದೇಶಕ್ಕೆ ಮಾತ್ರವಲ್ಲ ಅದು ಶುಭ ಕಾರ್ಯಗಳಿಗೂ ಅಗತ್ಯವಾಗಿ ಬೇಕು. ಕರ್ನಾಟಕದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಗಾರರಿದ್ದಾರೆ ಜಿಲ್ಲೆಯಲ್ಲಿಯೂ ಹೆಚ್ಚು ಅಡಿಕೆ ಬೆಳೆಯುವವರಿದ್ದಾರೆ. ಅಡಿಕೆಗೆ ಕೊಳೆರೋಗ ಬಂದಾಗ ರಾಜ್ಯ ಸರಕಾರವು 109 ಕೋಟಿ ರೂಪಾಯಿಯನ್ನು ಅಡಿಕೆ ಬೆಳೆಗಾರರಿಗೆ ಪರಿಹಾರ ಧನವಾಗಿ ನೀಡಿದೆ ಮತ್ತು 0%ನಲ್ಲಿ ಸಾಲ ನೀಡಿದೆ ಆದರೆ ಬಿಜೆಪಿಯ ಸಂಸದರು ಚುನಾವಣೆ ಬಂದಾಗ ಸಂಪಾಜೆಯಿಂದ ಮಂಗಳೂರು ವರೆಗೆ ನಡಿಗೆಯನ್ನು ಕೈಗೊಳ್ಳುತ್ತಾರೆ ಆದರೆ ಅಡಿಕೆ ಬೆಳೆಗಾರರಿಗೆ ತೊಂದರೆಯಾದಾಗ ನಮ್ಮ ಜಿಲ್ಲೆಯ ನಂ.1 ಸಂಸದರು ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದೇನೆ ಎನ್ನುತ್ತಾರೆ. ಅಡಿಕೆ ನಿಷೇಧ ವಿಚಾರ ಸಂಸತ್ತಿನಲ್ಲಿ ಚರ್ಚ್‌ಯಾಗುವಾಗ ಸರ್ಕಾರ ಅಡಿಕೆ ಮಂಡಳಿ ಮಾಡಲು ಹೊರಟಿದೆ ಅದಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಅನುದಾನ ನೀಡಬೇಕು. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಂಸದರು ಈಗ ರೈತರಿಗೆ ಸಂಕಷ್ಟವಾದಾಗ ಯಾವುದೇ ಬೆಂಬಲ ನೀಡದಿರುವುದು ದುರಾದೃಷ್ಟಕರ ಎಂದು ಖೇದ ವ್ಯಕ್ತಪಡಿಸಿದರು.

ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಮಾತನಾಡಿ ಎಲ್ಲಾ ಪಕ್ಷಗಳಲ್ಲಿಯೂ ಭ್ರಷ್ಠಾಚಾರಿಗಳಿದ್ದಾರೆ. ಕಾಂಗ್ರೆಸ್ ಬಿಜೆಪಿಯನ್ನು, ಬಿಜೆಪಿ ಕಾಂಗ್ರೆಸ್‌ನ್ನು ಬೈಯ್ಯುವುದಲ್ಲ ಬದಲಾಗಿ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ. ಅಡಕೆಯನ್ನು ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಪುನರ್ ಪರಿಶೀಲಿಸಿ ಬೆಳೆಗಾರರಿಗೆ ಉಂಟಾಗುವ ಸಂಕಷ್ಟದಿಂದ ಪಾರು ಮಾಡುವಂತೆ ಆಗ್ರಹಿಸಿದರು.

ಅಡಕೆಯನ್ನು ಕ್ಯಾನ್ಸರ್ ಕಾರಕ ಎಂಬ ವರದಿಯನ್ನು ಪುನರ್ ಪರಿಶೀಲಿಸಿ ಬೆಳೆಗಾರರಿಗೆ ಉಂಟಾಗುವ ಸಂಕಷ್ಟದಿಂದ ಪಾರು ಮಾಡುವ ಬಗ್ಗೆ ಮತ್ತು ಅಡಕೆ ಮಂಡಲಿ ಕೇಂದ್ರ ಮಟ್ಟದಲ್ಲಿ ಸ್ಥಾಪಿಸುವ ಬಗ್ಗೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಮೂಲಕ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಯಿತು.

ಜಿ.ಪಂ ಸದಸ್ಯ ಕಾವು ಹೇಮನಾಥ ಶೆಟ್ಟಿ, ಪುರಸಭಾ ನಾಮ ನಿರ್ದೇಶಿತ ಸದಸ್ಯ ಆಲ್ವಿನ್ ಮೆನೇಜಸ್, ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ರುಕ್ಕಯ್ಯ ಪೂಜಾರಿ, ಲಾಜರಸ್ ಡಿಕೋಸ್ತಾ, ವಕೀಲ ಪದ್ಮಪ್ರಸಾದ್ ಜೈನ್ ಹಾಗೂ ರೈತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News