×
Ad

ದಲಿತ ಮಹಿಳೆ ಕೃಷ್ಣಾಕುಮಾರಿ ಪಾಕಿಸ್ತಾನದ ಸೆನೆಟ್‌ಗೆ ಆಯ್ಕೆ

Update: 2018-03-04 15:10 IST

ಕರಾಚಿ, ಮಾ.4: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಕೃಷ್ಣಾ ಕುಮಾರಿ ಕೊಲ್ಹಿ ಪಾಕಿಸ್ತಾನದ ಸೆನೆಟ್ ಸದಸ್ಯೆಯಾಗಿ ಆಯ್ಕೆಯಾಗಿರುವ ಮೊತ್ತ ಮೊದಲ ಹಿಂದೂ ದಲಿತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ತಿಳಿಸಿದೆ.

 39ರ ಹರೆಯದ ಕೊಲ್ಹಿ ಸಿಂಧ್ ಪ್ರಾಂತ್ಯದ ಥಾರ್ ಜಿಲ್ಲೆಯ ನಗರ್‌ಪಾರ್ಕರ್ ಹಳ್ಳಿಯಿಂದ ಬಂದಿದ್ದು, ಬಿಲಾವಲ್ ಭುಟ್ಟೊ ಝರ್ದಾರಿ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಸದಸ್ಯೆಯಾಗಿದ್ದಾರೆ. ಸಿಂಧ್‌ನ ಅಲ್ಪಸಂಖ್ಯಾತ ಕೋಟಾದಡಿ ಸೆನೆಟರ್ ಆಗಿ ಕೊಲ್ಹಿ ಆಯ್ಕೆಯಾಗಿದ್ದಾರೆ. ಪಿಪಿಪಿ ಕೌರ್‌ಗೆ ಸೆನೆಟ್ ಟಿಕೆಟ್ ನೀಡಿತ್ತು.

 ಕೊಲ್ಹಿ ಆಯ್ಕೆ ಪಾಕಿಸ್ತಾನದಲ್ಲಿ ಮಹಿಳೆಯರು ಹಾಗೂ ಅಲ್ಪ ಸಂಖ್ಯಾತರ ಹಕ್ಕನ್ನು ಪ್ರತಿನಿಧಿಸುವ ಪ್ರಮುಖ ಮೈಲುಗಲ್ಲಾಗಿದೆ. ಪಿಪಿಪಿ ಈ ಹಿಂದೆ ರತ್ನಾ ಭಗವಾನ್‌ದಾಸ್ ಚಾವ್ಲಾರನ್ನು ಸೆನೆಟರ್ ಆಗಿ ನೇಮಕ ಮಾಡಿತ್ತು. ರತ್ನಾ ಸೆನೆಟರ್ ಆಗಿ ಆಯ್ಕೆಯಾಗಿದ್ದ ಮೊದಲ ಹಿಂದೂ ಮಹಿಳೆಯಾಗಿದ್ದರು.

 16ರ ಹರೆಯದಲ್ಲಿ ವಿವಾಹವಾಗಿದ್ದ ಕೊಲ್ಹಿ 2013ರಲ್ಲಿ ಸಿಂಧ್ ವಿವಿಯಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ತನ್ನ ಸಹೋದರನೊಂದಿಗೆ ಸಾಮಾಜಿಕ ಕಾರ್ಯಕರ್ತೆಯಾಗಿ ಪಿಪಿಪಿಯನ್ನು ಸೇರ್ಪಡೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News