ದ.ಕ. ಜಿಲ್ಲೆಯಲ್ಲಿ 22,513 ಸೇರ್ಪಡೆ ಸಹಿತ 16,66,814 ಮತದಾರರು
ಮಂಗಳೂರು, ಮಾ.4: ಮುಂದಿನ ವಿಧಾನಸಭಾ ಚುನಾವಣೆಗೆ ಸಂಪೂರ್ಣವಾಗಿ ಸಜ್ಜಾಗಿರುವ ದ.ಕ. ಜಿಲ್ಲಾಡಳಿತ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಂತೆ ಜಿಲ್ಲೆಯಲ್ಲಿ 16,66,814 ಮತದಾರರಿದ್ದಾರೆ. ಈ ಪೈಕಿ 8,20,764 ಪುರುಷರು ಮತ್ತು 8,46,050 ಮಹಿಳಾ ಮತದಾರರಾಗಿದ್ದಾರೆ. ಅರ್ಹ ಮತದಾರರ ಹೆಸರು ಬಿಟ್ಟು ಹೋಗಿದ್ದಲ್ಲಿ ಸೇರ್ಪಡೆಗೆ ಇನ್ನೂ ಅವಕಾಶವಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು ಅಂತಿಮ ಮತದಾರರ ಪಟ್ಟಿಗಳಲ್ಲಿ ನೋಂದಣಿಯಾದ ಮತದಾರರ ಸಂಖ್ಯೆ ಯನ್ನು ಮತ್ತು 2018ರ ಅಂದಾಜು ಜನಸಂಖ್ಯೆಯನ್ನು ವಿಶ್ಲೇಷಣೆ ನಡೆಸಿ ಕ್ರಮವಾಗಿ ಜಿಲ್ಲೆಯಲ್ಲಿ ಪುರುಷರು ಶೇ.73.02 ಮತ್ತು ಮಹಿಳೆಯರು ಶೇ.73.77 ಸಹಿತ ಶೇ.73.40 ಮತದಾರರಿರುವುದಾಗಿ ಅಂದಾಜಿಸಲಾಗಿದೆ. 2011ರ ಜನಗಣತಿಯಂತೆ ಜಿಲ್ಲೆಯ ಲಿಂಗಾನುಪಾತವು 1018 ಆಗಿದ್ದು, ಅಂತಿಮ ಮತದಾರರ ಪಟ್ಟಿಯಂತೆ ನೋಂದಣೆಯಾದ ಮತದಾರರ ಲಿಂಗಾನುಪಾತವು 1030 ಆಗಿರುತ್ತದೆ ಎಂದರು.
22,513 ಹೊಸ ಸೇರ್ಪಡೆ
ಈ ಬಾರಿ 22,513 ಮಂದಿ ಹೊಸ ಮತದಾರರ ಸೇರ್ಪಡೆಯಾಗಿದೆ. ಈ ಪೈಕಿ 10,461 ಪುರುಷರು ಮತ್ತು 12,052 ಮಹಿಳಾ ಮತದಾರರಾಗಿದ್ದಾರೆ. ಬೆಳ್ತಂಗಡಿಯಲ್ಲಿ 1,629, ಮೂಡುಬಿದಿರೆ 2,251, ಮಂಗಳೂರು ಉತ್ತರ 3,655, ಮಂಗಳೂರು ದಕ್ಷಿಣ 1,513, ಮಂಗಳೂರು ಕ್ಷೇತ್ರದಲ್ಲಿ 3,396, ಬಂಟ್ವಾಳ 4,492, ಪುತ್ತೂರು 3,142 ಮತ್ತು ಸುಳ್ಯ ಕ್ಷೇತ್ರದಲ್ಲಿ 2,435 ಮತದಾರರ ಸೇರ್ಪಡೆಯಾಗಿದೆ. ಜಿಲ್ಲೆಯಲ್ಲಿ 381 ಸೇವಾ ಮತದಾರರಿದ್ದು, ಎಪಿಕ್ ಕಾರ್ಡ್ ವಿತರಣೆ ಶೇ.98ರಷ್ಟು ಆಗಿದೆ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ತಿಳಿಸಿದರು.
1790 ಮತಗಟ್ಟೆ
ಜಿಲ್ಲೆಯಲ್ಲಿ 1790 ಮತಗಟ್ಟೆಗಳಿದ್ದು, ಶಿಥಿಲಾವಸ್ಥೆಯಲ್ಲಿದ್ದ 37 ಮತದಾನ ಕೇಂದ್ರಗಳನ್ನು ಬದಲಾವಣೆ ಮಾಡಲಾಗಿದೆ. ಈಗಾಗಲೇ ಮತಯಂತ್ರಗಳು ಜಿಲ್ಲಾ ಕೇಂದ್ರಕ್ಕೆ ತಲುಪಿದ್ದು, ದೆಹಲಿಯಿಂದ ಆಗಮಿಸಿದ 16 ಮಂದಿ ಇಂಜಿನಿಯರ್ ಗಳು ಮತಯಂತ್ರಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಪ್ರತಿ ರಾಜಕೀಯ ಪಕ್ಷಗಳ ಪ್ರಮುಖರೂ ಈ ಸಂದರ್ಭ ಉಪಸ್ಥಿತರಿದ್ದು, ಮತಯಂತ್ರ ಪರಿಶೀಲನೆಗೆ ಅವಕಾಶ ಕಲ್ಪಿಸಲಾಗಿದೆ. ಇನ್ನೂ 10 ದಿನಗಳ ಕಾಲ ಪರಿಶೀಲನೆ ನಡೆಯಲಿದೆ ಎಂದರು.
9,289 ವಿಕಲಚೇತನ ಮತದಾರರು
ಜಿಲ್ಲೆಯಲ್ಲಿ 9,289 ವಿಕಲಚೇತನ ಮತದಾರರಿದ್ದು ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಒತ್ತು ನೀಡಲಾಗಿದೆ. ಮತದಾನ ಪಟ್ಟಿಗೆ 262 ವಿಕಲಚೇತನರು ಸೇರ್ಪಡೆಯಾಗಿಲ್ಲ. ಅವರ ಸೇರ್ಪಡೆಗೆ ಕ್ರಮ ಜರಗಿಸಲಾಗುತ್ತಿದೆ. ಮಲಗಿದ್ದಲ್ಲಿಯೇ ಇರುವ ಮತದಾರರೂ ಕೂಡ ಮತದಾನ ಮಾಡಲು ಇಚ್ಛೆ ಪಟ್ಟಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಮತದಾನ ಪಟ್ಟಿಗೆ ಹೆಸರು ನೋಂದಣಿ ಪ್ರಕ್ರಿಯೆಗಳು ನಡೆಯುತ್ತಿದ್ದು, ಚುನಾವಣೆ ಘೋಷಣೆ ಆದ ಮೇಲೆ ಮತದಾನ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಲು ಅವಕಾಶವಿಲ್ಲ ಎಂದು ಕುಮಾರ್ ಸ್ಪಷ್ಟಪಡಿಸಿದರು.
ಗುರುತಿನ ಚೀಟಿ ನೀಡಿಕೆ
ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸ್ಪಟ್ಟಿರುವ 16,66,814 ಮತದಾರರ ಪೈಕಿ 16,24,137 ಮತದಾರರಿಗೆ ಈಗಾಗಲೇ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ನೀಡಲಾಗಿದ್ದು, ಶೇ.97.44 ಪ್ರಗತಿ ಸಾಧಿಸಲಾಗಿದೆ. 42,677 ಮತದಾರರಿಗೆ ಈಗಾಗಲೇ ಗುರುತಿನ ಚೀಟಿಗಳನ್ನು ತಯಾರಿಸಿ ವಿತರಿಸುವ ಕಾರ್ಯವನ್ನು ಜಿಲ್ಲೆಯ ಸಹಾಯಕ ಮತದಾರರ ನೋಂದಣಾಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಕುಮಾರ್ ತಿಳಿಸಿದರು.
ಕಂಟ್ರೋಲ್ ರೂಂ
ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಾಗಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಈಗಾಗಲೇ ಇರುವ ಕಂಟ್ರೋಲ್ ರೂಂ 1077 ಜೊತೆಗೆ ಜಿಲ್ಲಾಧಿಕಾರಿ ಕಚೇರಿಯ ಎರಡನೇ ಮಹಡಿಯಲ್ಲಿ ದಿನದ 24 ಗಂಟೆಯೂ ಕಾರ್ಯಾಚರಿಸುವ ಕಂಟ್ರೋಲ್ ರೂಂ (1800-425-2099, 08824-2420002) ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಸಿಬ್ಬಂದಿ ಇಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣಾ ನೀತಿ ಉಲ್ಲಂಘನೆಯ ದೂರುಗಳನ್ನು ಕೂಡಾ ಇಲ್ಲಿ ಸಲ್ಲಿಸಬಹುದು. ಮಾಹಿತಿಗೆ www.deodk.com ನ್ನು ಸಂಪರ್ಕಿಸಹುದು.
ಮಹಿಳಾ ಮತದಾರರ ಅಧಿಕ
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಹೊರತುಪಡಿಸಿದರೆ ಜಿಲ್ಲೆಯ ಒಟ್ಟು ಮತದಾರರ ಪೈಕಿ ಮಹಿಳಾ ಮತದಾರರೇ ಅಧಿಕವಾಗಿದ್ದಾರೆ. ಬೆಳ್ತಂಗಡಿ ಕ್ಷೇತ್ರದಲ್ಲಿ 2,13,875 ಮತದಾರರಿದ್ದು ಈ ಪೈಕಿ 1,07,230 ಪುರುಷರು ಮತ್ತು 1,06,645 ಮಹಿಳಾ ಮತದಾರರಾಗಿದ್ದಾರೆ.
ಮೂಡುಬಿದಿರೆ ಕ್ಷೇತ್ರದಲ್ಲಿ 1,94,947 ಮತದಾರರಿದ್ದು, ಈ ಪೈಕಿ 94,397 ಪುರುಷರು ಮತ್ತು 1,00,550 ಮಹಿಳಾ ಮತದಾರರಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ 2,28,025 ಮತದಾರರಿದ್ದು, ಈ ಪೈಕಿ 1,11,448 ಪುರುಷರು ಮತ್ತು 1,16,577 ಮಹಿಳೆಯರಿದ್ದಾರೆ. ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ 2,30,351ಮತದಾರರಿದ್ದು, ಈ ಪೈಕಿ 1,10,318 ಪುರುಷರು ಮತ್ತು 1,20,033 ಮಹಿಳೆಯರಿದ್ದಾರೆ. ಮಂಗಳೂರು ಕ್ಷೇತ್ರದಲ್ಲಿ 1,90,361 ಮತದಾರರಿದ್ದು, ಈ ಪೈಕಿ 93,708 ಪುರುಷರು ಮತ್ತು 96,653 ಮಹಿಳೆಯರಿದ್ದಾರೆ.
ಬಂಟ್ವಾಳ ಕ್ಷೇತ್ರದಲ್ಲಿ 2,16,027 ಮತದಾರರಿದ್ದು, ಈ ಪೈಕಿ 1,07,233 ಪುರುಷರು ಮತ್ತು 1,08,794 ಮಹಿಳೆಯರಿದ್ದಾರೆ. ಪುತ್ತೂರು ಕ್ಷೇತ್ರದಲ್ಲಿ 1,97,923 ಮತದಾರರಿದ್ದು, ಈ ಪೈಕಿ 98,928 ಪುರುಷರು ಮತ್ತು 98,995 ಮಹಿಳೆಯರಿದ್ದಾರೆ. ಸುಳ್ಯ ಕ್ಷೇತ್ರದಲ್ಲಿ 1,95,305 ಮತದಾರರಿದ್ದು, ಈ ಪೈಕಿ 97,502 ಪುರುಷರು ಮತ್ತು 97,803 ಮಹಿಳೆಯರಿದ್ದಾರೆ.
ಸುದ್ದಿಗೋಷ್ಠಿಯ ಬಳಿಕ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಹಸ್ತಾಂತರಿ ಸಲಾಯಿತು. ಈ ಸಂದರ್ಭ ವಿವಿಧ ಪಕ್ಷದ ಮುಖಂಡರಾದ ಬಿ.ಎ.ಮುಹಮ್ಮದ್ ಹನೀಫ್, ವಸಂತ ಆಚಾರಿ, ಮುನೀರ್ ಮುಕ್ಕಚೇರಿ ಮತ್ತಿತರರು ಮತದಾರರ ಪಟ್ಟಿಯನ್ನು ಸ್ವೀಕರಿಸಿದರು.