×
Ad

ಪಾಕಿಸ್ತಾನದಲ್ಲಿ ಎಐಎಂಪಿಎಲ್ ಬಿ ಶಾಖೆ ತೆರೆಯುವ ಆಹ್ವಾನಕ್ಕೆ ಮೌಲಾನಾ ಸಜ್ಜಾದ್ ನೋಮಾನಿ ಹೇಳಿದ್ದೇನು ?

Update: 2018-03-04 20:55 IST

ಉಡುಪಿ, ಮಾ. 4 : ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ ಬಿ) ಯ ವಕ್ತಾರ, ಹಿರಿಯ ಧಾರ್ಮಿಕ ವಿದ್ವಾಂಸ ಮೌಲಾನಾ ಸಜ್ಜಾದ್ ನೋಮಾನಿ ಉಡುಪಿಯಲ್ಲಿ ರವಿವಾರ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ನಡೆದ ಏಕತಾ ಸಮಾವೇಶದಲ್ಲಿ ಭಾಗವಹಿಸಿದ್ದರು. 

ತಮ್ಮ ಭಾಷಣದಲ್ಲಿ ಅವರು ಹಂಚಿಕೊಂಡ ಒಂದು ಘಟನೆ ಅತ್ಯಂತ ಆಸಕ್ತಿಕರವಾಗಿದೆ. ಅವರ ಮಾತುಗಳಲ್ಲಿ ಆ ವಿವರ ಇಲ್ಲಿದೆ:

"ನಾನು ಇತ್ತೀಚೆಗೆ ಮಕ್ಕಾದಲ್ಲಿದ್ದೆ.  ಹರಮ್ ಶರೀಫ್ ಸಮೀಪದಲ್ಲೇ ಕುಳಿತಿದ್ದೆ.  ಪಾಕಿಸ್ತಾನದ ಹಿರಿಯ ಧಾರ್ಮಿಕ ವಿದ್ವಾಂಸರ ಗುಂಪೊಂದು ನನ್ನನ್ನು ಹುಡುಕುತ್ತಿತ್ತು. ನಾನೂ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೆ. ಅವರು ಬಂದು, ನಾವು ಭೇಟಿಯಾಗಿ ಸ್ವಲ್ಪ ಹೊತ್ತು ಮಾತನಾಡಿದೆವು.  ಬಳಿಕ ಹೊಟೇಲ್ ನಲ್ಲಿ ಭೇಟಿಯಾಗಿ ವಿವರವಾಗಿ ಮಾತನಾಡೋಣ ಎಂದು ಹೊರಟೆವು.

ಹೊಟೇಲ್ ಗೆ ಬಂದ ಆ ವಿದ್ವಾಂಸರ ಗುಂಪು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಬಗ್ಗೆ ಬಹಳ ಅಭಿಮಾನದಿಂದ ಮಾತನಾಡಿದರು. ಎಲ್ಲ ಪಂಗಡಗಳ ಮುಸ್ಲಿಮರು ಒಂದೇ ವೇದಿಕೆಯಲ್ಲಿ ಸೇರಿರುವ ಕುರಿತು ಬಹಳ ಖುಷಿ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲೂ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಶಾಖೆಯೊಂದನ್ನು ತೆಗೆಯಿರಿ ಎಂದು ವಿನಂತಿಸಿದರು. ಅದಕ್ಕೆ ನಾನು ಹೇಳಿದೆ - ಅದು  "ಅಖಿಲ ಭಾರತ" ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ. ಅದರ ಹೆಸರಲ್ಲೇ ಅದು ಅಖಿಲ ಭಾರತ ಸಂಘಟನೆ ಎಂದು ಸ್ಪಷ್ಟವಾಗಿದೆ. ಹಾಗಾಗಿ ನೀವು ನಿಮ್ಮ ದೇಶವನ್ನು  ಭಾರತದೊಳಗೆ ವಿಲೀನ ಮಾಡಿ ಬಿಡಿ. ಆಗ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿಮಗೂ ಸಿಗುತ್ತದೆ "

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News