ಸರಕಾರವು 5ಜಿಗೆ ತರಂಗಗುಚ್ಛವನ್ನು ಸಮನ್ವಯಗೊಳಿಸುತ್ತಿದೆ: ದೂರಸಂಪರ್ಕ ಕಾರ್ಯದರ್ಶಿ

Update: 2018-03-04 15:43 GMT

ಬಾರ್ಸೆಲೋನ (ಸ್ಪೇನ್), ಮಾ.4: ಮುಂದಿನ ತಲೆಮಾರಿನ ಸೇವೆಯನ್ನು ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳುವ ತನ್ನ ಯೋಜನೆಯ ಅಂಗವಾಗಿ ಸರಕಾರವು ಈಗಾಗಲೇ 5ಜಿಗೆ ತರಂಗಗುಚ್ಛವನ್ನು ಸಮನ್ವಯಗೊಳಿಸುತ್ತಿದೆ. ಈ ಸೇವೆಯಿಂದ ಮೊಬೈಲ್ ಸಾಧನಗಳಲ್ಲಿ ಸೆಕೆಂಡಿಗೆ 1,000 ಮೆಗಾಬೈಟ್ ಡೌನ್‌ಲೋಡ್ ವೇಗವನ್ನು ಪಡೆಯುವ ನಿರೀಕ್ಷೆಯಿದೆ ಎಂದು ದೂರಸಂಪರ್ಕ ಕಾರ್ಯದರ್ಶಿ ಅರುಣಾ ಸುಂದರರಾಜನ್ ತಿಳಿಸಿದ್ದಾರೆ.

5ಜಿಯ ತರಂಗಗುಚ್ಛಕ್ಕೆ ಸಂಬಂಧಪಟ್ಟಂತೆ ನಾವು ಬಹುತೇಕ ಜಾಗತಿಕ ಮಟ್ಟದ ಜೊತೆ ತಾಳೆ ಹೊಂದಿದ್ದೇವೆ ಎಂದು ಬಾರ್ಸೆಲೋನದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅರುಣಾ ತಿಳಿಸಿದ್ದಾರೆ. ಈ ವೇಳೆ ಅವರು ದೂರಸಂಪರ್ಕ ಕ್ಷೇತ್ರದ ಪ್ರಮುಖರಾದ ಭಾರ್ತಿ ಏರ್‌ಟೆಲ್, ವೊಡಾಫೋನ್, ನೋಕಿಯ, ಎರಿಕ್ಸನ್, ಹ್ಯೂವೈ, ಕ್ವಾಲ್‌ಕೊಮ್, ಮೀಡಿಯಟೆಕ್, ಎನ್‌ಟಿಟಿ, ಇಂಟೆಲ್ ಹಾಗೂ ಇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದರು.

ದೂರಸಂಪರ್ಕ ಇಲಾಖೆಯು 3,500 ಮೆಗಹರ್ಟ್ಝ್ ಬ್ಯಾಂಡ್ ಮತ್ತು 26 ಗಿಗಹರ್ಟ್ಝ್ ಬ್ಯಾಂಡ್ ಜೊತೆಗೆ ಇ ಮತ್ತು ವಿ ಬ್ಯಾಂಡನ್ನು ಸಮನ್ವಯಗೊಳಿಸುತ್ತಿದೆ. ಸದ್ಯ 4ಜಿ ಸೇವೆಗಳನ್ನು 2,600ಕ್ಕಿಂತ ಕಡಿಮೆ ತರಂಗಗುಚ್ಛದ ಬ್ಯಾಂಡ್‌ನಲ್ಲಿ ನೀಡಲಾಗುತ್ತಿದೆ ಎಂದು ಅರುಣಾ ತಿಳಿಸಿದ್ದಾರೆ.

ದೂರಸಂಪರ್ಕ ಸಂಸ್ಥೆಗಳು ಸ್ವಯಂಚಾಲಿತ ಕಾರುಗಳು, ರೊಬೊಟಿಕ್ ಶಸ್ತ್ರಚಿಕಿತ್ಸೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ 5ಜಿ ಬಳಕೆಯ ವಿಧಾನಗಳ ಬಗ್ಗೆ ಸಂಶೋಧನೆ ನಡೆಸುತ್ತಿವೆ. ಕೃಷಿ ಕ್ಷೇತ್ರದಲ್ಲೂ 5ಜಿ ಸೇವೆಯನ್ನು ಬಳಸುವ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಲು ತಾಂತ್ರಿಕ ಸಂಸ್ಥೆಗಳಿಗೆ ದೂರಸಂಪರ್ಕ ಸಚಿವ ಮನೋಜ್ ಸಿನ್ಹಾ ಸೂಚಿಸಿದ್ದಾರೆ ಎಂದು ಅರುಣಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News