ಸುರತ್ಕಲ್: ಮುಂದುವರಿದ ಡಿವೈಎಫ್‌ಐ ಧರಣಿ
Update: 2018-03-04 22:29 IST
ಮಂಗಳೂರು, ಮಾ.4: ಸುರತ್ಕಲ್‌ನಲ್ಲಿ ತಾತ್ಕಾಲಿಕವಾಗಿ ಹೊಸದಾಗಿ ನಿರ್ಮಿಸಲ್ಪಟ್ಟ ಮಾರುಕಟ್ಟೆ ಕಟ್ಟಡವನ್ನು ಕೆಡವಿದ ಕೃತ್ಯವನ್ನು ಖಂಡಿಸಿ ಡಿವೈಎಫ್‌ಐ ಕಾರ್ಯಕರ್ತರು ಶನಿವಾರ ಆರಂಭಿಸಿದ್ದ ಧರಣಿಯು ರವಿವಾರವೂ ಮುಂದುವರಿದಿದೆ.
ಸರತಿ ಸಾಲಿನಲ್ಲಿ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್ ನೇತೃತ್ವದಲ್ಲಿ ಧರಣಿ ನಡೆಸಲಾಗುತ್ತಿದ್ದು, ನ್ಯಾಯ ಸಿಗುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ತಾತ್ಕಾಲಿಕ ಮಾರುಕಟ್ಟೆಯ ಅಂಗಡಿ ಹಂಚಿಕೆಯಲ್ಲಿ ಅವ್ಯವಹಾರವಾಗಿದೆ. ಹಾಗಾಗಿ ಮರು ಹಂಚಿಕೆ ಮಾಡಬೇಕು, ಕಟ್ಟಡ ಕೆಡವಿದರಿಂದ ದಂಡ ವಸೂಲಿ ಮಾಡಬೇಕು, ಪುನಃ ಮನಪಾ ಅದನ್ನು ಕಟ್ಟಿಸಿಕೊಡಬೇಕು ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ.
ಧರಣಿ ನಿರತ ಸ್ಥಳದಲ್ಲೇ ಶಾಸಕ ಮೊಯ್ದಿನ್ ಬಾವ, ಕಾರ್ಪೊರೇಟರ್ ಪ್ರತಿಭಾ ಕುಳಾಯಿ ಹಾದು ಹೋದರೂ ಕೂಡ ಇತ್ತ ಸುಳಿಯಲಿಲ್ಲ ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.