ಮಾರ್ಚ್ 11ರಿಂದ ದೆಹಲಿಯಲ್ಲಿ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವ
ಮಂಗಳೂರು,ಮಾ,4: ದೆಹಲಿಯಲ್ಲಿ ಮಾರ್ಚ್ 11ರಿಂದ 18ರವರೆಗೆ ದೆಹಲಿ ಕನ್ನಡ ಸಂಘದ ಆಶ್ರಯದಲ್ಲಿ ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸಹಯೋಗದೊಂದಿಗೆ ಕರ್ನಾಟಕ ಸರಕಾರದ ನೆರವಿನೊಂದಿಗೆ ತುಳುನಾಡ ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಉತ್ಸವ ಸಾಹಿತ್ಯ ಸಾಂಸ್ಕೃತಿಕ ಸಮಾವೇಶ ನಡೆಯಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹಾಗೂ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಜಂಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ರಾಷ್ಟ್ರದ ವಿವಿಧ ಭಾಗಗಳ ಜನರು ಸಾಂಸ್ಕೃತಿಕ ತಂಡಗಳು ಈ ಸಮಾವೇಶದಲ್ಲಿ ಭಾಗವಹಿಸಲಿದೆ.ಅಲ್ಲದೆ ತುಳು, ಇಂಗ್ಲೀಷ್, ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದೆ. ಮಾರ್ಚ್ 11ರಂದು ತುಳು ಭಾಷೆಯಲ್ಲಿ ಉದ್ಘಾಟನೆ ನಡೆಯಲಿದೆ. ಮಾರ್ಚ್ 17ರಂದು ಕನ್ನಡ ಭಾಷೆಯಲ್ಲಿ ಹಾಗೂ ಮಾ.18ರಂದು ಸಮಾರೋಪ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ. ಉಳಿದಂತೆ ಹಿಂದಿ, ಇಂಗ್ಲೀಷ್, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ರಾಣಿ ಅಬ್ಬಕ್ಕನ ಬಗ್ಗೆ ತಿಳಿಸುವ ವಿಚಾರ ಗೋಷ್ಠಿಗಳು ದೆಹಲಿ, ಜೆಎನ್‌ಯು ವಿಶ್ವ ವಿದ್ಯಾನಿಲಯದಲ್ಲಿ ನಡೆಯಲಿದೆ.
ಇದರೊಂದಿಗೆ ದೇಶದ ಇತರ ಭಾಷೆಗಳ ಜನರಿಗೂ ದೇಶದ ಪ್ರಥಮ ಬಾರಿಗೆ ಸ್ವಾತಂತ್ರ ಹೋರಾಟ ನಡೆಸಿದ ಮಹಿಳೆಯ ಚರಿತ್ರೆಯನ್ನು ವಿಸ್ತರಿಸಿದಂತಾಗುತ್ತದೆ ಎಂದು ವಸಂತ ಶೆಟ್ಟಿ ತಿಳಿಸಿದ್ದಾರೆ. ಮಾರ್ಚ್ 18ರಂದು ದೇಶದ ಅಮರ್ ಜವಾನ್ ಜ್ಯೋತಿ ದ್ವಾರದ ಬಳಿ ಕರಾವಳಿಯ ಹುಲಿ ವೇಶದ ತಂಡದಿಂದ ತುಳುನಾಡಿನ ಸಾಂಕೇತಿಕ ಕಲಾಪ್ರದರ್ಶನ ನಡೆಯಲಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬಯಸುವ ತಂಡಗಳಿಗೆ ಸಹಕಾರ ನೀಡಲಾಗುವುದು ಎಂದು ವಸಂತ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಬ್ಬಕ್ಕ ಉತ್ಸವ ಸಮಿತಿ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.