ದೇಶ ನಿರ್ಮಾಣದಲ್ಲಿ ಪಾಲುದಾರರಾಗಿ, ಗುಲಾಮರಾಗಬೇಡಿ: ಮೌಲಾನ ತೌಖೀರ್ ರಝಾ ಖಾನ್
ಉಡುಪಿ, ಮಾ. 4: ದೇಶದಲ್ಲಿ ಮುಸ್ಲಿಮರ ಸಮಸ್ಯೆಗಳು ಬಗೆಹರಿಯಬೇಕಾದರೆ ಸಕ್ರಿಯ ರಾಜಕೀಯ ಪ್ರಾತಿನಿಧ್ಯ ಅಗತ್ಯವಾಗಿದೆ ಎಂದು ಇತ್ತಿಹಾದೇ ಮಿಲ್ಲತ್ ಕೌನ್ಸಿಲ್‌ನ ಅಧ್ಯಕ್ಷ ಹಾಗೂ ಅಹ್ಲೆ ಸುನ್ನತ್ ವಲ್ ಜಮಾಅತ್‌ನ ಖ್ಯಾತ ವಿದ್ವಾಂಸ ಮೌಲಾನಾ ಅಹ್ಮದ್ ರಝಾ ಖಾನ್‌ರವರ ಮೊಮ್ಮಗ ಮೌಲಾನಾ ತೌಖೀರ್ ರಝಾ ಖಾನ್ ಅಭಿಪ್ರಾಯಪಟ್ಟಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ವತಿಯಿಂದ ನಗರದ ಬೀಡಿನಗುಡ್ಡೆಯ ಮಾಹಾತ್ಮಗಾಂಧಿ ಮೈದಾನದಲ್ಲಿ ನಡೆದ ‘ದೇಶ ನಿರ್ಮಾಣಕ್ಕಾಗಿ ಸಮುದಾಯದ ಸಬಲೀಕರಣ’ ಏಕತಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಸ್ಲಿಮರು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವ ಮೊದಲು ಸಕ್ರಿಯ ರಾಜಕೀಯದಲ್ಲಿ ಸಮುದಾಯದ ಪಾಲುದಾರಿಕೆಯ ಬೇಡಿಕೆಯನ್ನು ಆ ಪಕ್ಷದ ಮುಂದಿಡಬೇಕು. ಮುಸ್ಲಿಮರ ಬೇಡಿಕೆಗಳನ್ನು ಆ ಪಕ್ಷ ಬಗೆಹರಿಸಲು ಸಿದ್ಧವಿರುವುದಾದರೆ ಬೆಂಬಲಿಸಬಹುದು. ಈ ಮೂಲಕ ಮುಸ್ಲಿಮರು ತಮ್ಮ ಮೇಲಿನ ಸಂಕಷ್ಟ ಹಾಗೂ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಲು ಸಾಧ್ಯವಿದೆ ಎಂದರು.
ಬೆಂಬಲಿತ ರಾಜಕೀಯ ಪಕ್ಷದೊಂದಿಗೆ ಮುಸ್ಲಿಮರು ಪ್ರಬಲ ಶಕ್ತಿಯಾಗಿ ಮೂಡಿಬರಬೇಕು. ರಾಜಕೀಯ ಪಕ್ಷದಲ್ಲಿ ಕೇವಲ ಗುಲಾಮಗಿರಿಯ ಕೆಲಸವನ್ನು ಮಾಡಿಕೊಂಡಿರದೆ, ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸುವಂತೆ ಸಮುದಾಯಕ್ಕೆ ಅವರು ಕರೆ ನೀಡಿದರು.
ದೇಶದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳು ಹಾಗೂ ಪ್ರಸ್ತುತ ಸನ್ನಿವೇಶವನ್ನು ಉಲ್ಲೇಖಿಸಿ ಮಾತನಾಡಿದ ಮೌಲಾನಾ ತೌಖೀರ್ ರಝಾ ಖಾನ್ ಅವರು, ಇಂತಹ ಅಪಾಯವನ್ನು ಎದುರಿಸಲು ಮುಸ್ಲಿಮರು ಏಕತೆಯನ್ನು ಪ್ರದರ್ಶಿಸುವುದು ಅನಿವಾರ್ಯವಾಗಿದೆ. ಸಮುದಾಯದ ಮೇಲಿನ ಕಾಳಜಿ, ಅನುಕಂಪ ಪ್ರಸಕ್ತ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಸ್ಲಿಮರ ಐಕ್ಯತೆಗಾಗಿ ಶ್ರಮಿಸುತ್ತಿರುವ ಸಂಘಟನೆಗಳನ್ನು ಬೆಂಬಲಿಸುವ ಮೂಲಕ ಭಿನ್ನತೆಯಲ್ಲೂ ಏಕತೆಯನ್ನು ಪ್ರದರ್ಶಿಸಬೇಕಾದ ಆವಶ್ಯಕತೆ ಇದೆ ಎಂದವರು ಒತ್ತಿ ಹೇಳಿದರು.
ಪದೇ ಪದೇ ಮುಸ್ಲಿಮರ ದೇಶ ಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ. ಮುಸ್ಲಿಮರ ವಿರುದ್ಧ ದ್ವೇಷದ ಭಾವನೆಗಳನ್ನು ಬಿತ್ತಲಾಗುತ್ತಿದೆ. ಇದರಿಂದ ಮುಸ್ಲಿಮರು ವಿಚಲಿತರಾಗಬೇಕಾಗಿಲ್ಲ. ಆತಂಕ ಪಡಬೇಕಾಗಿಲ್ಲ. ನೈಜ ಮುಸಲ್ಮಾನ ಎಂದೂ ದೇಶಭ್ರಷ್ಟನಾಗಲಾರ. ಆದ್ದರಿಂದ ಮುಸ್ಲಿಮರು ಈ ದೇಶದ ಶತ್ರುಗಳಾಗಿರದೆ, ಮುಸ್ಲಿಮರನ್ನು ಕೆರಳಿಸುವ, ಉದ್ರೇಕಕಾರಿ ಭಾಷಣ ಮಾಡಿ ದ್ವೇಷ ಬಿತ್ತುವ ಮೂಲಕ ಅಪಾಯ ತಂದೊಡ್ಡುವವರೇ ದೇಶದ ನಿಜವಾದ ಶತ್ರುಗಳು ಎಂದು ಅವರು ನುಡಿದರು.
ದೇಶದಲ್ಲಿ ಬಾಂಬ್ ಸ್ಫೋಟಗಳ ಹಿಂದೆ ಆರೆಸ್ಸೆಸ್
ದೇಶದ ವಿವಿಧ ಭಾಗಗಳಲ್ಲಿ ನಡೆದಿರುವ ಬಾಂಬ್ ಸ್ಫೋಟಗಳ ಹಿಂದೆ ಆರೆಸ್ಸೆಸ್ ಕೈವಾಡ ಇದೆ. ಇವುಗಳ ಬಗ್ಗೆ ಸಮಗ್ರ ತನಿಖೆ ನಡೆದರೆ ಮೋದಿ ಪಾತ್ರದ ಬಗ್ಗೆ ಸತ್ಯ ಹೊರಬರಲಿದೆ ಎಂದು ಮೌಲಾನಾ ತೌಖೀರ್ ರಝಾ ಖಾನ್ ಹೇಳಿದರು.
ದೇಶವನ್ನೇ ಬೆಚ್ಚಿ ಬೀಳಿಸಿದ ಮುಂಬೈ ದಾಳಿಗೆ ಸಂಬಂಧಿಸಿ ಮಾತನಾಡಿದ ಅವರು ಮುಂಬೈ ದಾಳಿ ನಡೆಸಲು ಆತಂಕವಾದಿಗಳು ಬಂದಿರಲಿಲ್ಲ. ಬದಲಾಗಿ ಅವರನ್ನು ಆಹ್ವಾನಿಸಲಾಗಿತ್ತು. ಈ ಮೂಲಕ ಹೇಮಂತ್ ಕರ್ಕೆರೆ ಸಹಿತ ಅವರ ತಂಡದ ಕೆಲವರನ್ನು ಹತ್ಯೆ ಮಾಡಲಾಗಿತ್ತು. ಈ ಆತಂಕವಾದಿಗಳು ಗುಜರಾತ್‌ನಿಂದ ಮುಂಬೈ ಪ್ರವೇಶಿಸಿದ್ದರು ಎಂದು ಹೇಳಿದರು.