×
Ad

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ, ಸಿದ್ದರಾಮಯ್ಯ ಫೇಲ್: ಮುರಳೀಧರ್ ರಾವ್

Update: 2018-03-05 23:24 IST

ಉಡುಪಿ, ಫೆ.5: ಬೆಂಗಳೂರು ಇಂದು ಕೊಲೆ, ಅಪರಾಧ, ಅತ್ಯಾಚಾರಗಳ ನಗರವಾಗಿದೆ. ಇಲ್ಲಿ ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಇವರಿಂದ ರಾಜ್ಯದ ವಿಕಾಸ ಸಾಧ್ಯವಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪೂರ್ಣ ಫೇಲ್ ಆಗಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಮುರಳೀಧರ ರಾವ್ ಟೀಕಿಸಿದ್ದಾರೆ.

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಾಗೂ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯನ್ನು ವಿರೋಧಿಸಿ ನಗರದ ಕಿನ್ನಿಮುಲ್ಕಿಯಲ್ಲಿ ಸೋಮವಾರ ಬಿಜೆಪಿ ವತಿಯಿಂದ ಆಯೋಜಿಸಲಾದ ಜನ ಸುರಕ್ಷಾ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕರ್ನಾಟಕದಲ್ಲಿ 50 ಹಿಂದೂ ಯುವಕರ ಹತ್ಯೆಗಳು ನಡೆದಿವೆ. ಇದೆಲ್ಲವೂ ಆಕಸ್ಮಿಕ ಸಾವುಗಳಲ್ಲ, ಬದಲು ಗುರಿ ಇಟ್ಟುಕೊಂಡು ಮಾಡುವ ಕೊಲೆಗಳಾಗಿವೆ ಎಂದು ಆರೋಪಿಸಿದ ಅವರು, ರಾಜ್ಯ ಕಾಂಗ್ರೆಸ್ ಸರಕಾರ ನಾಲಾಯಕ್. ರಾಹುಲ್ ಮತ್ತು ಸಿದ್ದರಾಮಯ್ಯ ಜೋಡಿ ಈ ಬಾರಿಯ ಚುನಾವಣೆ ಎದುರಿಸಿದರೆ ಕಾಂಗ್ರೆಸ್ ಇನ್ನಷ್ಟು ಕೆಳಮಟ್ಟಕ್ಕೆ ಇಳಿಯಲಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ದೇಶ ವಿರೋಧಿ ಶಕ್ತಿಗಳು ಮತ್ತಷ್ಟು ಬೆಳೆಯಲಿದೆ ಎಂದರು.

ಮಾಜಿ ಉಪ ಮುಖ್ಯಮಂತ್ರಿ ಈಶ್ವರಪ್ಪ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕೆಜೆಪಿ ಹಾಗೂ ಬಿಜೆಪಿ ಪ್ರತ್ಯೇಕ ಸ್ಪರ್ಧಿಸಿದ ಪರಿಣಾಮ ಸಿದ್ಧರಾಮಯ್ಯ ಲಾಟರಿ ಮೂಲಕ ಮುಖ್ಯಮಂತ್ರಿಯಾದರು. ಇವರು ಲಾಟರಿ ಸಿಎಂ ಹೊರತು ಜನರ ಸಿಎಂ ಅಲ್ಲ. ಕಾಂಗ್ರೆಸ್ ರಾಜ್ಯದಲ್ಲಿ ಇದು ಕೊನೆಯ ಸರಕಾರ ಮತ್ತು ಸಿದ್ದರಾಮಯ್ಯ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಎಂದು ಹೇಳಿದರು.

ಈ ರಾಜ್ಯದ ಜನತೆಯ ಸುರಕ್ಷತೆ ಬಿಜೆಪಿಯಿಂದ ಮಾತ್ರ ಸಾಧ್ಯ. ನಾವು ಅಧಿಕಾರಕ್ಕೆ ಬಂದರೆ ಮೊದಲು ಜಾರಿ ಮಾಡುವ ಮಸೂದೆ ಗೋಹತ್ಯೆ ನಿಷೇಧ. ನಮ್ಮಿಂದ ಮಾತ್ರ ಧರ್ಮರಕ್ಷಣೆ ಸಾಧ್ಯ ಎಂದು ಅವರು ತಿಳಿಸಿದರು.

ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರಘುಪತಿ ಭಟ್, ಜಯಪ್ರಕಾಶ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಶೀಲಾ ಕೆ.ಶೆಟ್ಟಿ, ಭಾರತಿ ಶೆಟ್ಟಿ, ಶ್ಯಾಮಲಾ ಕುಂದರ್, ದಿನಕರ ಬಾಬು ಮೊದಲಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಮಲಾಕ್ಷ ಹೆಬ್ಬಾರ್ ಸ್ವಾಗತಿಸಿದರು. ಪ್ರಭಾಕರ ಪೂಜಾರಿ ವಂದಿಸಿ ದರು. ಕುತ್ಯಾರು ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ಅಂಬಾಗಿಲು ಜಂಕ್ಷನ್‌ನಿಂದ ಆರಂಭಗೊಂಡ ಜನ ಸುರಕ್ಷಾ ಪಾದಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಕಿನ್ನಿಮುಲ್ಕಿಯಲ್ಲಿ ಸಮಾಪ್ತಿಗೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News