ಭಯೋತ್ಪಾದಕರು ಯಾರು ಎಂದು ಬೆಂಕಿ ಹಚ್ಚಲು ಹೊರಟವರು ಹೇಳಬೇಕಿಲ್ಲ: ಸುಹೈಲ್ ಕಂದಕ್
ಮಂಗಳೂರು, ಮಾ. 6: ಭಯೋತ್ಪಾದಕರು ಯಾರು ಎಂಬುವುದು ಜಿಲ್ಲೆಯ ಜನತೆಗೆ ಸ್ಪಷ್ಟವಾಗಿ ತಿಳಿದಿದೆ. ಹೆಣಗಳ ಮೇಲೆ ರಾಜಕೀಯ ಮಾಡಿ, ಜಿಲ್ಲೆಗೆ ಬೆಂಕಿ ಹಚ್ಚಲು ಹೊರಟ, ಬೆಂಕಿ ನಾಯಕರು ಹೇಳಬೇಕಿಲ್ಲ ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್ ಹೇಳಿದ್ದಾರೆ.
ಸೋಮವಾರ ಬಂಟ್ವಾಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಸುಹೈಲ್ ಕಂದಕ್ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಅಭೂತಪೂರ್ವ ಅಭಿವೃದ್ಧಿ ಕಾರ್ಯಗಳ ಹರಿಕಾರ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರ ಬಗ್ಗೆ ಮಾತಾಡುವ ಯಾವುದೇ ನೈತಿಕತೆ ಇಲ್ಲ, ತನ್ನದೇ ಪಕ್ಷದ ಕಾರ್ಯಕರ್ತರು, ನಮ್ಮ ದೇಶದ ಸೂಕ್ಷ್ಮ ಮಾಹಿತಿಗಳನ್ನು ರಹಸ್ಯವಾಗಿ ಪಾಕಿಸ್ತಾನಕ್ಕೆ ರವಾನಿಸಿದ ಸಂಧರ್ಭದಲ್ಲಿ ಅವರನ್ನು ಭಯೋತ್ಪಾದಕರು ಎಂದು ಹೇಳುವ ಧೈರ್ಯ ಬೆಂಕಿ ಸಂಸದರಿಗೆ ಇರಲಿಲ್ಲವೇ ಎಂದು ಸುಹೈಲ್ ಕಂದಕ್ ಪ್ರಶ್ನಿಸಿದ್ದಾರೆ.
ಬಡವರಿಗೆ ಅನ್ನ ಭಾಗ್ಯ ಯೋಜನೆ ಒದಗಿಸಿ, ಹಸಿವು ನಿವಾರಿಸಿರುವ ನಾಡದೊರೆ ಸಿದ್ದರಾಮಯ್ಯ ಅವರ ವಿರುದ್ಧ ನಾಲಗೆ ಹರಿಯಬಿಡುವ ಮುನ್ನ ಅಂದು ತಾವು ಹೇಳಿದ ಒಂದು ರೂಪಾಯಿಗೆ ಸಿಗುವ ಹದಿನೈದು ಡಾಲರ್ ಅನ್ನು ಜಿಲ್ಲೆಯ ಜನತೆಗೆ ಸಿಗುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸುಹೈಲ್ ಕಂದಕ್ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ತನ್ನ ಜನಪರ ಕಾರ್ಯಗಳ ಮೂಲಕ, ಅಭಿವೃದ್ಧಿ ಭಾಗ್ಯ ಯೋಜನೆಗಳ ಮೂಲಕ ಬಡವರ, ಅಸಕ್ತರ ಪಾಲಿನ ಸುಲ್ತಾನ್ ಆಗಿದ್ದಾರೆ. ನುಡಿ ದಂತೆ ನಡೆದು ತನ್ನ ಆಶ್ವಾಸನೆಗಳನ್ನು ಪೂರೈಸಿದ್ದಾರೆ ಆದರೆ ಅಚ್ಛೇ ದೀನ್ ಆಯೇಗಾ ಎಂದು ಆಡಳಿತಕ್ಕೆ ಬಂದ ಬೆಂಕಿ ಸಂಸದ ನಳಿನ್ ರ ಸರಕಾರ ಸುಳ್ಳು ಹೇಳಿ ಜನತೆಯನ್ನು ವಂಚಿಸುತ್ತಿದೆ. ದೇಶವನ್ನು ಲೂಟಿ ಮಾಡಿದ ಕಾರ್ಪೊರೇಟ್ ಗಳಿಗೆ ಎಸ್ಕೇಪ್ ಭಾಗ್ಯವನ್ನು ಕರುಣಿಸಲಾಗುತ್ತಿದೆ. ಇದರ ಬಗ್ಗೆ ಮಾತಾಡಲು ಧೈರ್ಯವಿಲ್ಲದ ನಳಿನ್ ಕುಮಾರ್ ತನ್ನ ಅಧ್ಯಕ್ಷ ಶಾ ಹೇಳಿರುವಂತೆ ಬೆಂಕಿ ಹಚ್ಚುವ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ. ಅದರ ಭಾಗವಾಗಿ ಗ್ರಾಮ ಪಂಚಾಯತ್ ಸದಸ್ಯರಾಗಲೂ ಅರ್ಹತೆ ಇಲ್ಲದ ಸಂಘ ಪರಿವಾರದ ರಬ್ಬರ್ ಸ್ಟ್ಯಾಂಪ್ ಆಗಿರುವ ಸಂಸದರಾದ ನಳಿನ್ ಕುಮಾರ್ ರಿಂದ ಇಂತಹ ಬಾಲಿಶ ಹೇಳಿಕೆಗಳು ಬರುತ್ತಿವೆ ಮತ್ತು ಇದು ಎಂದಿನಂತೆ ಬಿಜೆಪಿ ಪಕ್ಷದ ನಾಯಕರ ಕೊಳಕು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ ಎಂದು ಸುಹೈಲ್ ಕಂದಕ್ ತಿರುಗೇಟು ನೀಡಿದರು.