ಪೆರಿಯಾರ್ ಪ್ರತಿಮೆಯನ್ನೂ ಉರುಳಿಸಲಾಗುವುದು: ಬಿಜೆಪಿ ನಾಯಕ ರಾಜಾ ವಿವಾದಾತ್ಮಕ ಟ್ವೀಟ್
ಚೆನ್ನೈ, ಮಾ.6: ಕಮ್ಯುನಿಸ್ಟ್ ಕ್ರಾಂತಿಕಾರಿ ವ್ಲಾದಿಮರ್ ಲೆನಿನ್ ರೀತಿಯಲ್ಲೇ ಸಮಾಜ ಸುಧಾರಕ ಪೆರಿಯಾರ್ (ಇವಿಆರ್ ರಾಮಸಾಮಿ) ಅವರ ಪ್ರತಿಮೆಯನ್ನೂ ಉರುಳಿಸಲಾಗುವುದು ಎಂದು ಬಿಜೆಪಿ ನಾಯಕ ರಾಜಾ ಟ್ವೀಟ್ ಮಾಡಿದ್ದು, ಹೊಸ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ಹಲವು ರಾಜಕೀಯ ಪಕ್ಷಗಳ ನಾಯಕರು ರಾಜಾ ಹೇಳಿಕೆಯನ್ನು ಖಂಡಿಸಿದ್ದಾರೆ.
ಇಂದು ಟ್ವೀಟ್ ಮಾಡಿದ್ದ ರಾಜಾ, “ಲೆನಿನ್ ಯಾರು?, ಭಾರತ ಹಾಗು ಲೆನಿನ್ ಗಿರುವ ಸಂಬಂಧವೇನು?, ಭಾರತಕ್ಕೂ ಕಮ್ಯುನಿಸ್ಟ್ ಗಳಿಗೂ ಇರುವ ಸಂಬಂಧವೇನು? ತ್ರಿಪುರಾದಲ್ಲಿ ಲೆನಿನ್ ರ ಪ್ರತಿಮೆಯನ್ನು ಉರುಳಿಸಲಾಗಿದೆ. ಇಂದು ತ್ರಿಪುರಾದಲ್ಲಿ ಲೆನಿನ್ ರ ಪ್ರತಿಮೆ, ನಾಳೆ ಇವಿಆರ್ ರಾಮಸಾಮಿಯ ಪ್ರತಿಮೆ.” ಎಂದಿದ್ದರು.
ರಾಜಾ ಟ್ವೀಟ್ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಲೇ ಟ್ವೀಟನ್ನು ಅಳಿಸಿ ಹಾಕಲಾಗಿದೆ. ಡಿಎಂಕೆ, ಎಂಡಿಎಂಕೆ, ದ್ರಾವಿಡ ಕಳಗಂ ಸಿಪಿಂ ಹಾಗು ಸಿಪಿಐ ರಾಜಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿವೆ.
ರಾಜಾರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಹೇಳಿದ್ದರೆ, ತಮಿಳುನಾಡಿನಲ್ಲಿರುವ ಒಂದೇ ಒಂದು ಪೆರಿಯಾರ್ ಪ್ರತಿಮೆಯನ್ನು ಮುಟ್ಟಿ ನೋಡಿ ಎಂದು ಎಂಡಿಎಂಕೆ ಮುಖ್ಯಸ್ಥ ವೈಕೋ ಹಾಗು ದ್ರಾವಿಡ ಕಳಗಂ ನಾಯಕರಾದ ಶುಭಾ ವೀರಪಾಂಡಿಯನ್ ಸವಾಲೆಸೆದಿದ್ದಾರೆ.