×
Ad

ದಿಲ್ಲಿ ಮಾಸ್ಟರ್‌ಪ್ಲಾನ್ 2021 : ತಿದ್ದುಪಡಿ ಪ್ರಸ್ತಾವಕ್ಕೆ ಸುಪ್ರೀಂ ತಡೆ

Update: 2018-03-06 19:46 IST

ಹೊಸದಿಲ್ಲಿ, ಮಾ.6: ದಾದಾಗಿರಿ ನಿಲ್ಲಿಸುವಂತೆ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ಕ್ಕೆ ಸೂಚಿಸಿರುವ ಸುಪ್ರೀಂಕೋರ್ಟ್, ದಿಲ್ಲಿ ಮಾಸ್ಟರ್‌ಪ್ಲಾನ್ 2021ಕ್ಕೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ತಡೆಯಾಜ್ಞೆ ನೀಡಿದೆ

  ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಸೇರಿಸಲಾದ ಹೆಚ್ಚುವರಿ ನಿರ್ಮಾಣಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ದಿಲ್ಲಿ ಮಾಸ್ಟರ್‌ಪ್ಲಾನ್ 2021ಕ್ಕೆ ತಿದ್ದುಪಡಿ ತರಲು ಡಿಡಿಎ ಉದ್ದೇಶಿಸಿದೆ. ವಸತಿ ಕಟ್ಟಡಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಈ ಮೇಲಿನಂತೆ ಸೂಚನೆ ನೀಡಿದೆ.

ಪ್ರಸ್ತಾವಿತ ಬದಲಾವಣೆಯಿಂದ ಪರಿಸರದ ಮೇಲೆ ಆಗುವ ಪರಿಣಾಮ ಹಾಗೂ ಸುರಕ್ಷಾ ವಿಷಯಗಳ ವಿವರ ನೀಡುವ ಅಫಿದಾವಿತ್ ಸಲ್ಲಿಸದ ಬಗ್ಗೆ ಡಿಡಿಎಯನ್ನು ತರಾಟೆಗೆತ್ತಿಕೊಂಡ ಸುಪ್ರೀಂಕೋರ್ಟ್, ಇಂತಹ ದಾದಾಗಿರಿಗೆ ಆಸ್ಪದವಿಲ್ಲ. ನಾವು ಬಯಸಿದ್ದನ್ನು ಮಾಡುತ್ತೇವೆ ಎಂದು ಸುಪ್ರೀಂಕೋರ್ಟ್‌ಗೆ ನೀವು ತಿಳಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿತು. ಉಪಹಾರ್‌ನಲ್ಲಿ ಸಂಭವಿಸಿದ ಬೆಂಕಿ ಅನಾಹುತ ಅಥವಾ ಬವಾನಾ, ಕಮಲಾ ಮಿಲ್ಸ್‌ನಲ್ಲಿ ಸಂಭವಿಸಿದ್ದ ಬೆಂಕಿ ದುರಂತದಿಂದಲೂ ನೀವು ಪಾಠ ಕಲಿತಿಲ್ಲ ಎಂದು ನ್ಯಾಯಮೂರ್ತಿಗಳಾದ ಮದನ್ ಲೋಕುರ್ ಹಾಗೂ ದೀಪಕ್ ಗುಪ್ತ ಅವರಿದ್ದ ನ್ಯಾಯಪೀಠ ತಿಳಿಸಿತು. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬಜಾಲ್ ಮುಖ್ಯಸ್ಥರಾಗಿರುವ ಡಿಡಿಎಯು ಮಾಸ್ಟರ್ ಪ್ಲಾನ್ 2021ಕ್ಕೆ ಪ್ರಸ್ತಾವಿಸಲಾಗಿರುವ ಕೆಲವು ಬದಲಾವಣೆಗಳಿಗೆ ಇತ್ತೀಚೆಗೆ ಅನುಮೋದನೆ ನೀಡಿತ್ತು. ಕೆಲವರ ಒತ್ತಡದಿಂದ ಈ ಬದಲಾವಣೆಗೆ ಅನುಮೋದನೆ ನೀಡಿರುವಂತೆ ಕಾಣುತ್ತದೆ. ಹೀಗಾದರೆ ದಿಲ್ಲಿಯಲ್ಲಿ ವಾಸಿಸುತ್ತಿರುವ ಜನರ ಪಾಡೇನು ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಒಂದು ತಿಂಗಳ ಹಿಂದೆ, ದಿಲ್ಲಿಯಲ್ಲಿ ವಾಣಿಜ್ಯ ಸಮುಚ್ಛಯಗಳನ್ನು ಜಪ್ತಿ ಮಾಡಿದ ಸಂದರ್ಭ ಕೂಡಾ ಡಿಡಿಎಯನ್ನು ಸುಪ್ರೀಂಕೋರ್ಟ್ ತರಾಟೆಗೆತ್ತಿಕೊಂಡಿತ್ತು. ಕಣ್ಣುಮುಚ್ಚಿಕೊಂಡು ಕುಳಿತು ಅನಾಹುತ ಸಂಭವಿಸಲಿ ಎಂದು ಕಾಯುತ್ತಿದ್ದೀರಿ ಎಂದು ಟೀಕಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News