ಭಟ್ಕಳ: ಕಾರು-ಟ್ಯಾಂಕರ್ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು
ಭಟ್ಕಳ, ಮಾ. 6: ಕಾರು ಹಾಗೂ ಟ್ಯಾಂಕರ್ ಮಧ್ಯೆ ಮುಖಾಮುಖಿ ಢಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳರವಾರ ತಾಲೂಕಿನ ಬೇಂಗ್ರೆಯ ಮಾವಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಬೈಂದೂರು ತಾಲೂಕು ಉಪ್ಪುಂದದ ನಿವಾಸಿ ಅಣ್ಣಪ್ಪ ಖಾರ್ವಿ (60) ಎಂದು ಗುರುತಿಸಲಾಗಿದೆ.
ಗಾಯಗೊಂಡವರಲ್ಲಿ ಮೃತರ ಪತ್ನಿ ಮೂಕಾಂಬೆ ಖಾರ್ವಿ (55), ಸುಬ್ರಹ್ಮಣ್ಯ ಖಾರ್ವಿ (30), ಪ್ರಭಾಕರ ಖಾರ್ವಿ (45), ನಾಗವೇಣಿ ಖಾರ್ವಿ (33), ಪುಷ್ಪಾ, ಶಾರದಾ ಹಾಗೂ ಮೂವರು ಮಕ್ಕಳು ಸೇರಿದ್ದಾರೆ.
ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸುಬ್ರಹ್ಮಣ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಶಿರಸಿಯಲ್ಲಿ ನಡೆಯುತ್ತಿರುವ ಮಾರಿಕಾಂಬೆಯ ಜಾತ್ರೆಗೆ ಹೋಗಿದ್ದ ಖಾರ್ವಿ ಕುಟುಂಬ ಜಾತ್ರೆಯಲ್ಲಿ ದೇವಿಯ ದರ್ಶನದ ಬಳಿಕ ಉಪ್ಪುಂದಕ್ಕೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು, ಟ್ಯಾಂಕರ್ ಮುಗುಚಿ ಬಿದ್ದಿದೆ.
ಟ್ಯಾಂಕರ್‌ನಿಂದ ತೈಲ ಸೋರಿಕೆಯಾಗಿ ಅಪಾಯದ ಸೂಚನೆ ಇರುವುದರಿಂದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಮುನ್ನೆಚ್ಚರಿಕೆಯ ಕ್ರಮ ಕೈಗೊಂಡಿದೆ. ಈ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.