ಛತ್ತೀಸ್‌ಗಡದಲ್ಲಿ ಮಾವೋವಾದಿಗಳಿಂದ ಮಾಜಿ ಪೊಲೀಸ್ ಹತ್ಯೆ, ವಾಹನಗಳಿಗೆ ಬೆಂಕಿ

Update: 2018-03-06 14:30 GMT

ರಾಯಪುರ,ಮಾ.6: ಛತ್ತೀಸ್‌ಗಡದ ಕೊಂಟಾ ಜಿಲ್ಲೆಯ ದೋರನಾಪಾಲ್‌ನಲ್ಲಿ ಸೋಮವಾರ ರಾತ್ರಿ ಮಾವೋವಾದಿಗಳಿಂದ ಭಾರೀ ಹಿಂಸಾಚಾರ ನಡೆದಿದ್ದು, ಓರ್ವ ಮಾಜಿ ಪೊಲೀಸ್‌ನನ್ನು ಕೊಲ್ಲಲಾಗಿದೆ. ಹತ್ತಕ್ಕೂ ಅಧಿಕ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಮೊದಲು ಬಸ್ಸೊಂದನ್ನು ನಿಲ್ಲಿಸಿದ ಮಾವೋವಾದಿಗಳು ಮುನ್ನಾ ಸೋದಿ ಎಂಬಾತನನ್ನು ಹೊರಗೆಳೆದು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಬಳಿಕ ಇತರ ಪ್ರಯಾಣಿಕರನ್ನು ಕೆಳಗಿಳಿಸಿ ಬಸ್ಸಿಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ಆ ಮಾರ್ಗದಲ್ಲಿ ಚಲಿಸುತ್ತಿದ್ದ ಇನ್ನೂ ಎರಡು ಬಸ್ಸುಗಳು, ಮೂರು ಲಾರಿಗಳು ಮತ್ತು ಇತರ ಆರು ವಾಹನಗಳನ್ನೂ ತಡೆದು ಬೆಂಕಿ ಹಚ್ಚಿದ್ದಾರೆ. ಎಲ್ಲ ಬಸ್ಸುಗಳು ಮಾವೋವಾದಿಗಳ ಹಾವಳಿ ಹೆಚ್ಚಿರುವ ದಾಂತೆವಾಡಾ, ಜಗದಾಲ್ಪುರ, ಮಲ್ಕನಗಿರಿ ಮತ್ತು ಸುಕ್ಮಾಗಳಿಂದ ತೆಲಂಗಾಣದತ್ತ ಪ್ರಯಾಣಿಸುತ್ತಿದ್ದವು ಎಂದು ಪೊಲೀಸರು ಮಂಗಳವಾರ ತಿಳಿಸಿದರು.

ವೈಯಕ್ತಿಕ ದ್ವೇಷದಿಂದ ಸೋದಿಯ ಹತ್ಯೆಯಾಗಿರುವಂತಿದೆ ಎಂದು ಸುಕ್ಮಾ ಎಸ್‌ಪಿ ಅಭಿಷೇಕ್ ಮೀನಾ ಅವರು ಸುದ್ದಿಗಾರರಿಗೆ ತಿಳಿಸಿದರು. ಈ ಹಿಂದೆ ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದ ಸೋದಿಯನ್ನು ಆತನ ಪತ್ನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇವೆಯಿಂದ ವಜಾಗೊಳಿಸಲಾಗಿತ್ತು. ಆತ ಬಸ್‌ನಲ್ಲಿ ಸುಕ್ಮಾದಿಂದ ತೆಲಂಗಾಣದ ಮಣಿಕೊಂಟಾದಲ್ಲಿಯ ತನ್ನ ಸ್ವಗ್ರಾಮಕ್ಕೆ ಪ್ರಯಾಣಿಸುತ್ತಿದ್ದ. ಸ್ಥಳದಲ್ಲಿ ಪತ್ತೆಯಾಗಿರುವ ಕರಪತ್ರಗಳಲ್ಲಿ ಮಾ.2ರಂದು ಗಡಶಿರೋಳಿಯಲ್ಲಿ 10 ಮಾವೋವಾದಿಗಳ ಹತ್ಯೆಗಳಿಗೆ ಪ್ರತೀಕಾರದ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪತ್ನಿಯ ಕೊಲೆ ಪ್ರಕರಣದಲ್ಲಿ 2012ರಲ್ಲಿ ಸೋದಿಯನ್ನು ನ್ಯಾಯಾಲಯವು ದೋಷಿಯೆಂದು ಘೋಷಿಸಿತ್ತು. 2017ರಲ್ಲಿ ಆತ ಜೈಲಿನಿಂದ ಬಿಡುಗಡೆಗೊಂಡಿದ್ದ. ಆತನ ಪತ್ನಿಯ ತಮ್ಮ ಮಾವೋವಾದಿ ಸಂಘಟನೆಯಲ್ಲಿದ್ದಾನೆ ಎಂಬ ವರದಿಗಳಿವೆ. ಸೋದಿಯನ್ನು ಹುಡುಕಲೆಂದೇ ಮಾವೋವಾದಿಗಳು ಬಸ್ಸುಗಳನ್ನು ತಡೆದು ನಿಲ್ಲಿಸಿದ್ದರು ಎಂದು ಮೀನಾ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News