ಮಹಿಳಾ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣ: ಪ್ರಮೋದ್
ಉಡುಪಿ, ಮಾ.6: ರಾಜ್ಯದಲ್ಲಿ ಇದೇ ಎ.1ರಿಂದ ಎಲ್ಲಾ ಸರಕಾರಿ ಶಾಲಾ ಕಾಲೇಜುಗಳಲ್ಲಿ, ಕೆಜಿಯಿಂದ ಪಿಜಿವರೆಗೆ ವಿದ್ಯಾಭ್ಯಾಸ ಮಾಡುವ ಎಲ್ಲಾ ಮಹಿಳಾ ವಿದ್ಯಾರ್ಥಿಗಳಿಗೆ, ಕಲಿಕೆಗೆ ಸಂಬಂಧಿಸಿದ ಎಲ್ಲಾ ವಿಧದ ಶುಲ್ಕಗಳಿಂದ ವಿನಾಯತಿ ನೀಡಿ ಸಂಪೂರ್ಣ ಉಚಿತ ಶಿಕ್ಷಣ ನೀಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಮಂಗಳವಾರ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಬೆಳ್ಳಿಹಬ್ಬ ಸಂಭ್ರಮ, 2017-18ನೇ ಸಾಲಿನ ವಾರ್ಷಿಕೋತ್ಸವ, ಹಳೆವಿದ್ಯಾರ್ಥಿ ಸಂಭ್ರಮ ಹಾಗೂಅಂತರ ಕಾಲೇಜು ಸಾಂಸ್ಕೃತಿಕ ವೈಭವವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈ ಬಾರಿಯ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ವಿದ್ಯಾರ್ಥಿಗಳಿಗಾಗಿ 2 ಪ್ರಮುಖ ಘೋಷಣೆ ಮಾಡಿದ್ದು, ಮೊದಲನೆಯದಾಗಿ ರಾಜ್ಯದಲ್ಲಿ ಮಹಿಳಾ ವಿದ್ಯಾಭ್ಯಾಸವನ್ನು ಉತ್ತೇಜಿಸುವ ಸಲುವಾಗಿ ಕೆಜಿಯಿಂದ ಪಿಜಿವರೆಗೆ ಸರಕಾರಿ ಶಾಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ವರ್ಗದ ವಿದ್ಯಾರ್ಥಿನಿ ಯರಿಗೆ ಸಂಪೂರ್ಣ ಉಚಿತ ಶಿಕ್ಷಣ ಹಾಗೂ ಎರಡನೇಯದಾಗಿ ರಾಜ್ಯದ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲ್ಯವನ್ನು ನೀಡಲಾಗಿದೆ ಎಂದರು. ಸರಕಾರ ನೀಡಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುವಂತೆ ಸಚಿವರು ಕಿವಿ ಮಾತು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾಲೇಜು ಶಿಕ್ಷಣ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ಕಾಲೇಜುಗಳಿಗೆ ಮೂಲ ಭೂತ ಸೌಕರ್ಯ ಒದಗಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಅತಿಥಿ ಉಪನ್ಯಾಸಕರ ನೇಮಕ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕ್ರಮ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾರ್ಷಿಕವಾಗಿ ಕನಿಷ್ಠ 60 ಸಾವಿರ ರೂ.ಗಳಷ್ಟನ್ನು ಸರಕಾರ ವೆಚ್ಚ ಮಾಡುತ್ತಿದೆ ಎಂದು ಪ್ರಮೋದ್ ತಿಳಿಸಿದರು.
ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಯೋಜನೆ ಕಾರಣಾಂತರದಿಂದ ಸ್ಥಗಿತಗೊಂಡಿದ್ದು, ಈಗ ಸಮಸ್ಯೆ ಬಗೆಹರಿದಿದೆ. ಯೋಜನೆ ಮತ್ತೆ ಜಾರಿಗೆ ಬರಲಿದೆ ಎಂದವರು ಹೇಳಿದರು.
ಇದೇ ಸಂದರ್ಭದಲ್ಲಿ ಮಂಗಳೂರು ವಿವಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಚಂದನಾ, ಶಿವಕುಮಾರ್, ರಮ್ಯಾ, ಅಶ್ವಿನಿ ಹಾಗೂ ವಿವಿ ಯಿಂದ ನಗದು ಪುರಸ್ಕಾರ ಪಡೆದ ಸಂಪ್ರೀತಾ ಅವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಅಭಿವೃದ್ದಿಗಾಗಿ ಶ್ರಮಿಸಿದ ನಿವೃತ್ತ ಪ್ರಾಂಶುಪಾಲರಾದ ಡಾ. ಪಾದೆಕಲ್ಲು ವಿಷ್ಣು ಭಟ್, ಪ್ರೊ.ಜಗದೀಶ ರಾವ್ ಹಾಗೂ ಜಿ. ಯೋಗಾನಂದ ಅವರನ್ನು ಸಹ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಜಿಪಂ ಸದಸ್ಯ ಜನಾರ್ಧನ ತೋನ್ಸೆ, ತಾಪಂ ಸದಸ್ಯ ಧನಂಜಯ ಕುಂದರ್, ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷ ಜಯಕುಮಾರ್ ಬೆಳ್ಕಳೆ, ಮಂಗಳೂರು ವಿವಿಯ ಜಂಟಿ ನಿರ್ದೇಶಕ ಪ್ರೊ.ಮಹೇಶ್ ರಾವ್, ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ ಸ್ವಾಗತಿಸಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.ಉಪನ್ಯಾಸಕ ಡಾ. ದುಗ್ಗಪ್ಪ ಕಜೆಕಾರ್ ನಿರೂಪಿಸಿದರು.