×
Ad

ಉಪ್ಪುಂದ ಜನತಾ ಕಾಲನಿ ಸರಕಾರಿ ಶಾಲೆಯ ಮುಖ್ಯಶಿಕ್ಷಕಿಗೆ ದೈಹಿಕ ಹಲ್ಲೆ: ಎಸ್‌ಡಿಎಂಸಿ ಸದಸ್ಯ ಸೆರೆ

Update: 2018-03-06 20:49 IST

ಬೈಂದೂರು, ಮಾ. 6: ಉಪ್ಪುಂದ ಜನತಾ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಮುಖ್ಯ ಶಿಕ್ಷಕಿಯನ್ನು ಎಸ್‌ಡಿಎಂಸಿ ಅಧ್ಯಕ್ಷೆ ಹಾಗೂ ಸದಸ್ಯ ಸ್ಟಾಫ್ ರೂಮ್‌ನಲ್ಲಿ ಕೂಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಸೋಮವಾರ ಸಂಜೆ ನಡೆದಿದೆ.

ಈ ಘಟನೆಯಿಂದ ಮಾನಸಿಕವಾಗಿ ಆಘಾತಗೊಂಡು ಕುಸಿದು ಬಿದ್ದ ಶಾಲಾ ಮುಖ್ಯ ಶಿಕ್ಷಕಿ ಉಪ್ಪುಂದ ಗ್ರಾಮದ ರಥಬೀದಿಯ ಮಮತಾ ಕುಮಾರಿ (49) ಅವರನ್ನು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಡಿಎಂಸಿ ಸದಸ್ಯ ಮೋಹನಚಂದ್ರ ಖಾರ್ವಿ ಎಂಬಾತನನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.

ಮಮತಾ ಕುಮಾರಿ ಕಳೆದ ಮೂರು ವರ್ಷಗಳಿಂದ ಉಪ್ಪುಂದ ಜನತಾ ಕಾಲನಿಯ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ಪ್ರಸ್ತುತ ನಾಲ್ಕು ತಿಂಗಳುಗಳಿಂದ ಪ್ರಭಾರ ಮುಖ್ಯೋಪಾಧ್ಯಾಯರಾಗಿದ್ದಾರೆ. ಅವರು ಮಾ. 5ರಂದು ಮಧ್ಯಾಹ್ನ 2:30ರ ಸುಮಾರಿಗೆ 6ನೆ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವಾಗ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ಹಾಗೂ ಸದಸ್ಯ ಮೋಹನಚಂದ್ರ ಖಾರ್ವಿ ಏಕಾಏಕಿ ಶಾಲೆಯ ತರಗತಿಗೆ ಬಂದು ತರಗತಿ ನಡೆಸದಂತೆ ತಡೆದರೆಂದು ದೂರಲಾಗಿದೆ.

ನಂತರ ಅವರು ಮಮತಾರನ್ನು ಸ್ಟಾಪ್ ರೂಮಿಗೆ ಬರುವಂತೆ ಗದರಿಸಿದ್ದು, ಇದರಿಂದ ಹೆದರಿದ ಮಮತಾ ಇತರ ಶಿಕ್ಷಕಿಯರೊಂದಿಗೆ ಸ್ಟಾಪ್ ರೂಮಿಗೆ ಹೋಗಿದ್ದು, ಅಲ್ಲಿ ಲಕ್ಷ್ಮೀ ಹಾಗೂ ಮೋಹನಚಂದ್ರ ಖಾರ್ವಿ, ಮಮತಾ ಕುಮಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಟೇಬಲ್ ಮೇಲಿದ್ದ ಪುಸ್ತಕ ದಿಂದ ಮುಖಕ್ಕೆ ಹೊಡೆದಿದ್ದರೆನ್ನಲಾಗಿದೆ.

ಬಳಿಕ ಕೆಲವು ಜನರನ್ನು ಹಾಗು ಎಸ್‌ಡಿಎಂಸಿಯ ಇತರ ಸದಸ್ಯರನ್ನು ಕರೆಯಿಸಿದ ಅವರಿಬ್ಬರು ಮಮತಾ ಅವರಲ್ಲಿ ಹಾಳೆಯೊಂದಕ್ಕೆ ಸಹಿ ಹಾಕುವಂತೆ ಒತ್ತಡ ಹಾಕಿದರು. ಸಹಿ ಮಾಡಲು ನಿರಾಕರಿಸಿದ ಮಮತಾ ಅವರಲ್ಲಿ ಮೋಹನ ಚಂದ್ರ ಅಸಭ್ಯವಾಗಿ ವರ್ತಿಸಿದರೆಂದು ದೂರಿನಲ್ಲಿ ತಿಳಿಸಲಾಗಿದೆ. ಸಹಿ ಮಾಡದಿದ್ದಕ್ಕೆ ಮಮತಾ ಮತ್ತು ಇತರ ಶಿಕ್ಷಕಿಯರನ್ನು ಸ್ಟಾಪ್‌ರೂಮ್ ಒಳಗೆ ಬಾಗಿಲು ಹಾಕಿ ಹೊರಗೆ ಹೋಗದಂತೆ ರಾತ್ರಿ 7:30ರವರೆಗೆ ಕೂಡಿ ಹಾಕಿದ್ದರು ಎಂದು ತಿಳಿದುಬಂದಿದೆ.

ಇದರಿಂದ ಮಾನಸಿಕವಾಗಿ ಆಘಾತಗೊಂಡ ಮಮತಾ ಸ್ಟಾಪ್‌ರೂಮ್ ನಲ್ಲಿ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಲಾಯಿತು. ಸರಕಾರಿ ಶಿಕ್ಷಕಿಯಾಗಿರುವ ನನಗೆ ಸರಕಾರಿ ಕರ್ತವ್ಯ ನಡೆಸಲು ಅಡ್ಡಿಪಡಿಸಿ, ದೈಹಿಕ ಹಲ್ಲೆಯನ್ನು ನಡೆಸಿರುವುದಾಗಿ ಮಮತಾ ಕುಮಾರಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಎಸ್‌ಡಿಎಂಸಿ ಸದಸ್ಯ ಮೋಹನ ಚಂದ್ರ ಖಾರ್ವಿಯನ್ನು ಬಂಧಿಸಿ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊರ್ವ ಆರೋಪಿ ಎಸ್‌ಡಿಎಂಸಿ ಅಧ್ಯಕ್ಷೆ ಲಕ್ಷ್ಮೀ ತಲೆಮರೆಸಿಕೊಂಡಿದ್ದು, ಅವರಿಗೆ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News