ಮಂಗಳೂರನ್ನು ರಾಜ್ಯದ ನಂ.2ನೆ ನಗರವನ್ನಾಗಿಸುವ ಗುರಿ: ಜೆ.ಆರ್.ಲೋಬೊ
ಮಂಗಳೂರು, ಮಾ.6: ರಾಜ್ಯದ 2ನೆ ನಗರವನ್ನಾಗಿ ಮಂಗಳೂರು ನಗರವನ್ನು ನಿರ್ಮಿಸುವ ಗುರಿ ಹೊಂದಲಾಗಿದ್ದು, ಇದಕ್ಕೆ ಸರ್ವರ ಸಹಕಾರ ಅಗತ್ಯ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ನಗರದ ಬೆಂದೂರ್‌ನಲ್ಲಿರುವ ಸಂತ ಸೆಬೆಸ್ಟಿನ್ ಪ್ಲಾಟಿನಂ ಜ್ಯುಬಿಲಿ ಆಡಿಟೋರಿಯಂನಲ್ಲಿ ಮಂಗಳವಾರ ಮನಪಾ ವತಿಯಿಂದ 112.09 ಕೋ.ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಹಾಗೂ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಬಂದರು, ವಿಮಾನ, ರೈಲು ನಿಲ್ದಾಣವಲ್ಲದೆ, ರಾಷ್ಟ್ರೀಯ ಹೆದ್ದಾರಿಯೂ ಇದೆ. ಈ ನಾಲ್ಕನ್ನು ಒಳಗೊಂಡ ಯಾವ ಹಿರಿಮೆ ಕೂಡ ರಾಜ್ಯದ ಇತರ ನಗರಗಳಿಗಿಲ್ಲ. ಹಾಗಾಗಿ ಮಂಗಳೂರಿನ ಅಭಿವೃದ್ಧಿ ಕ್ಷಿಪ್ರಗತಿಯಲ್ಲಿ ಸಾಧ್ಯ. ಇಲ್ಲಿಗೆ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಅದಕ್ಕೂ ಮೊದಲು ಸಾಮರಸ್ಯ ಬೇಕಾಗಿದೆ. ಮಂಗಳೂರಿಗರು ಆ ಕೈಂಕರ್ಯವನ್ನು ಮಾಡಬೇಕಿದೆ ಎಂದು ಜೆ.ಆರ್.ಲೋಬೊ ಹೇಳಿದರು.
ಇದು ಚುನಾವಣೆ ಸಂದರ್ಭದ ಕೆಲಸ ಕಾರ್ಯಗಳಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಾಗಲೇ ಅಭಿವೃದ್ಧಿಗೆ ಚಾಲನೆ ನೀಡಿದೆ. ಈಗಲೂ ನೀಡಲಾಗುತ್ತಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಲೋಬೊ ತಿಳಿಸಿದರು.
ಮೇಯರ್ ಕವಿತಾ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಮೇಯರ್ ರಜನೀಶ್, ಮನಪಾ ಸಚೇತಕ ಶಶಿಧರ ಹೆಗ್ಡೆ, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಬಿತಾ ಮಿಸ್ಕಿತ್, ನಾಗವೇಣಿ, ಕಾರ್ಪೊರೇಟರ್‌ಗಳಾದ ಭಾಸ್ಕರ ಮೊಯ್ಲಿ, ಲತೀಫ್ ಕಂದುಕ ಉಪಸ್ಥಿತರಿದ್ದರು. ಮನಪಾ ಆಯುಕ್ತ ಮುಹಮ್ಮದ್ ನಝೀರ್ ಸ್ವಾಗತಿಸಿದರು.