ಮ್ಯಾನ್ಮಾರ್: ‘ಜನಾಂಗೀಯ ನಿರ್ಮೂಲನೆ’ ಮುಂದುವರಿಕೆ

Update: 2018-03-06 16:39 GMT

ಯಾಂಗನ್ (ಮ್ಯಾನ್ಮಾರ್), ಮಾ. 6: ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ‘ಜನಾಂಗೀಯ ನಿರ್ಮೂಲನೆ’ ಮುಂದುವರಿಯುತ್ತಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಹಾಯಕ ಮಹಾಕಾರ್ಯದರ್ಶಿ ಆ್ಯಂಡ್ರೂ ಗಿಲ್ಮರ್ ಮಂಗಳವಾರ ಹೇಳಿದ್ದಾರೆ.

ಕಳೆದ ವರ್ಷದ ಆಗಸ್ಟ್ 25ರಂದು ರೊಹಿಂಗ್ಯಾ ಬಂಡುಕೋರರು ಸೇನಾ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ ನಡೆದ ಸೇನಾ ದಮನ ಕಾರ್ಯಾಚರಣೆಯಲ್ಲಿ ನೂರಾರು ರೊಹಿಂಗ್ಯಾ ಅಲ್ಪಸಂಖ್ಯಾತರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸುಮಾರು 7 ಲಕ್ಷ ರೊಹಿಂಗ್ಯಾ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ.

ಬಾಂಗ್ಲಾದೇಶದ ಕಾಕ್ಸ್‌ಬಝಾರ್ ಜಿಲ್ಲೆಯಲ್ಲಿರುವ ರೊಹಿಂಗ್ಯಾ ನಿರಾಶ್ರಿತ ಶಿಬಿರಗಳಿಗೆ ನಾಲ್ಕು ದಿನಗಳ ಭೇಟಿ ನೀಡಿದ ಬಳಿಕ ಗಿಲ್ಮರ್ ಈ ಹೇಳಿಕೆ ನೀಡಿದ್ದಾರೆ. ತನ್ನ ಪ್ರವಾಸದ ವೇಳೆ ಅವರು ಇತ್ತೀಚೆಗೆ ಮ್ಯಾನ್ಮಾರ್‌ನಿಂದ ಪರಾರಿಯಾಗಿರುವ ನಿರಾಶ್ರಿತರನ್ನು ಭೇಟಿಯಾಗಿದ್ದಾರೆ.

‘‘ಕಾಕ್ಸ್‌ಬಝಾರ್‌ನಲ್ಲಿ ನಾನು ಏನು ನೋಡಿದ್ದೇನೆಯೋ ಮತ್ತು ಕೇಳಿದ್ದೇನೆಯೋ, ಅದರಿಂದ ಇದಕ್ಕಿಂತ ಬೇರೆ ನಿರ್ಧಾರವೊಂದಕ್ಕೆ ಬರಬಹುದು ಎಂದು ನನಗನಿಸುವುದಿಲ್ಲ’’ ಎಂದು ಗಿಲ್ಮರ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಮ್ಯಾನ್ಮಾರ್ ಸೈನಿಕರು ರೊಹಿಂಗ್ಯಾ ಮುಸ್ಲಿಮರನ್ನು ಕೊಲ್ಲುತ್ತಿದ್ದಾರೆ, ಅವರ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ ಮತ್ತು ಮನೆಗಳನ್ನು ಸುಡುತ್ತಿದ್ದಾರೆ ಎಂಬುದಾಗಿ ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ರೊಹಿಂಗ್ಯಾ ನಿರಾಶ್ರಿತರು ಆರೋಪಿಸಿದ್ದಾರೆ.

ಬ್ರಿಟನ್ ಸಂಸದರಿಗೆ ಭೇಟಿ ನಿರಾಕರಿಸಿದ ಮ್ಯಾನ್ಮಾರ್

ರೊಹಿಂಗ್ಯಾ ಸ್ಥಿತಿಗತಿ ಅಧ್ಯಯನದ ಉದ್ದೇಶಕ್ಕಾಗಿ ಮ್ಯಾನ್ಮಾರ್‌ಗೆ ಭೇಟಿ ನೀಡಬಯಸಿದ ಸಂಸದೀಯ ಸಮಿತಿಯೊಂದರ ಸದಸ್ಯರಿಗೆ ಮ್ಯಾನ್ಮಾರ್ ವೀಸಾ ನಿರಾಕರಿಸಿದೆ ಎಂದು ಬ್ರಿಟನ್ ಹೇಳಿದೆ.

ಬ್ರಿಟನ್ ಸಂಸತ್ತಿನ ಅಂತಾರಾಷ್ಟ್ರೀಯ ಅಭಿವೃದ್ಧಿ ಸಮಿತಿ (ಐಡಿಸಿ)ಯು ಮ್ಯಾನ್ಮಾರ್ ಮತ್ತು ಲಕ್ಷಾಂತರ ರೊಹಿಂಗ್ಯಾ ನಿರಾಶ್ರಿತರು ಆಶ್ರಯ ಪಡೆದಿರುವ ಬಾಂಗ್ಲಾದೇಶಕ್ಕೆ ಭೇಟಿ ನೀಡಬೇಕಾಗಿತ್ತು.

ನಿರಾಶ್ರಿತರಿಗೆ ಅತಿ ಹೆಚ್ಚು ನೆರವು ನೀಡುವರ ಪೈಕಿ ಬ್ರಿಟನ್ ಒಂದಾಗಿದೆ.

ಮ್ಯಾನ್ಮಾರ್ ರೊಹಿಂಗ್ಯಾರನ್ನು ನಡೆಸಿಕೊಳ್ಳುತ್ತಿರುವ ರೀತಿ, ಅವರ ಸಾಮೂಹಿಕ ವಲಸೆ ಹಾಗೂ ಸುರಕ್ಷಾ ಕ್ರಮವಿಲ್ಲದೆ ಸಾವಿರಾರು ನಿರಾಶ್ರಿತರನ್ನು ವಾಪಸ್ ಮ್ಯಾನ್ಮಾರ್‌ಗೆ ಕಳುಹಿಸಲು ನಡೆಯುತ್ತಿರುವ ಹುನ್ನಾರದ ಬಗ್ಗೆ ಜನವರಿಯಲ್ಲಿ ಪ್ರಕಟಗೊಂಡ ವರದಿಯಲ್ಲಿ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News